ಅಮೆಝಾನ್ ಮ್ಯಾನೇಜರ್ ಹತ್ಯೆಯ ಹಿಂದೆ 18ರ ಹರೆಯದ ಯುವಕನ ನೇತೃತ್ವದ ‘ಮಾಯಾ ಗ್ಯಾಂಗ್!
ಮಧ್ಯರಾತ್ರಿ ನಡೆದಿದ್ದ ಅಮೆಝಾನ್ ಮ್ಯಾನೇಜರ್ ಹರ್ಪ್ರೀತ್ ಗಿಲ್ ಹತ್ಯೆಯ ಪ್ರಮುಖ ಆರೋಪಿಯು ಕೇವಲ 18 ವರ್ಷದ ಯುವಕನಾಗಿದ್ದು, ಆತನ ವಿರುದ್ಧ ನಾಲ್ಕು ಹತ್ಯೆ ಪ್ರಕರಣಗಳಿವೆ. ಆತನ ಗುಂಪಿನಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ಗನ್ ಹಿಡಿದುಕೊಂಡು ಚಲನಚಿತ್ರ ಮಾದರಿಯ ಸಂಭಾಷಣೆಗಳನ್ನು ಹೇಳುವ ಇನ್ಸ್ಟಾ ರೀಲ್ ಗಳನ್ನೂ ಅವರೆಲ್ಲ ಮಾಡಿದ್ದಾರೆ
ಹೊಸದಿಲ್ಲಿ: ಮಧ್ಯರಾತ್ರಿ ನಡೆದಿದ್ದ ಅಮೆಝಾನ್ ಮ್ಯಾನೇಜರ್ ಹರ್ಪ್ರೀತ್ ಗಿಲ್ ಹತ್ಯೆಯ ಪ್ರಮುಖ ಆರೋಪಿಯು ಕೇವಲ 18 ವರ್ಷದ ಯುವಕನಾಗಿದ್ದು, ಆತನ ವಿರುದ್ಧ ನಾಲ್ಕು ಹತ್ಯೆ ಪ್ರಕರಣಗಳಿವೆ. ಆತನ ಗುಂಪಿನಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಸದಸ್ಯರಿದ್ದು, ಗನ್ ಹಿಡಿದುಕೊಂಡು ಚಲನಚಿತ್ರ ಮಾದರಿಯ ಸಂಭಾಷಣೆಗಳನ್ನು ಹೇಳುವ ಇನ್ಸ್ಟಾ ರೀಲ್ ಗಳನ್ನೂ ಅವರೆಲ್ಲ ಮಾಡಿದ್ದಾರೆ ಎಂಬ ಸಂಗತಿ ತನಿಖೆಯ ಸಂದರ್ಭದಲ್ಲಿ ಬಯಲಾಗಿದೆ ಎಂದು ndtv.com ವರದಿ ಮಾಡಿದೆ.
ಮಾಯಾನ ಇನ್ಸ್ಟಾಗ್ರಾಮ್ ಸ್ವವಿವರದಲ್ಲಿ “ನಾಮ್ ಬದ್ನಾಮ್, ಪತಾ ಕಬ್ರಿಸ್ಥಾನ್, ಉಮ್ರಾ ಜೀನೆ ಕಿ, ಶೌಕ್ ಮರ್ನೆ ಕ” (ಹೆಸರು ಕುಖ್ಯಾತ, ವಿಳಾಸ ಸ್ಮಶಾನ, ಆಯಸ್ಸು ಬದುಕಿರುವಷ್ಟು ದಿನ, ಹುಚ್ಚು ಸಾಯಲು) ಎಂದು ನಮೂದಿಸಲಾಗಿದೆ.
‘ಜೈಲ್” ಎಂಬ ಶೀರ್ಷಿಕೆ ಹೊಂದಿರುವ ಇನ್ಸ್ಟಾ ರೀಲ್ ಒಂದರಲ್ಲಿ ಹಲವಾರು ಯುವಕರು ಸರಳುಗಳ ಹಿಂದಿರುವುದು, ಮತ್ತೊಬ್ಬ ಯುವಕ ಸಿಡಿಯುತ್ತಿರುವ ಗನ್ ಹಿಡಿದ ಭಂಗಿ ನೀಡಿರುವ ಮಾಯಾನತ್ತ ತೋರಿಸುತ್ತಿರುವುದನ್ನು ಕಾಣಬಹುದಾಗಿದೆ. “ಮಾಯಾ ಗ್ಯಾಂಗ್” ಎಂಬ ಶೀರ್ಷಿಕೆ ಹೊಂದಿರುವ ಮತ್ತೊಂದು ರೀಲ್ ನಲ್ಲಿ ಸುಮಾರು ಒಂದು ಡಜನ್ ಯುವಕರು ಫೋಟೋಗೆ ಭಂಗಿ ನೀಡಿದ್ದಾರೆ. ಈ ಗುಂಪು ಕೇವಲ ತನ್ನನ್ನು ಪ್ರದರ್ಶಿಸಿಕೊಳ್ಳುವ ಉದ್ದೇಶ ಹೊಂದಿರುವ ಯುವಕರ ಗುಂಪು ಮಾತ್ರವಲ್ಲ; ಬದಲಿಗೆ ಈಶಾನ್ಯ ದಿಲ್ಲಿಯನ್ನು ಭಯಭೀತಗೊಳಿಸಿರುವ ಗುಂಪು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಗುಂಪು ತನ್ನ ನಾಯಕನ ಹೆಸರಿನೊಂದಿಗೆ ತನ್ನನ್ನು ತಾನು ‘ಮಾಯಾ ಗ್ಯಾಂಗ್’ ಎಂದು ಕರೆದುಕೊಂಡಿದೆ. ಹರ್ಪ್ರೀತ್ ಗಿಲ್ ಹತ್ಯೆಯ ಸಂಬಂಧ ಪೊಲೀಸರು ಮಾಯಾ ಹಾಗೂ ಆತನ ಸಹಚರ ಬಿಲಾಲ್ ಗಣಿ ಎಂಬಾತನನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ 18 ವರ್ಷಕ್ಕೆ ಕಾಲಿರಿಸಿರುವ ಮಾಯಾ, ಬಾಲಾಪರಾಧಿಯಾಗಿ ಕನಿಷ್ಠ ಪಕ್ಷ ನಾಲ್ಕು ಹತ್ಯೆಗಳಲ್ಲಿ ಭಾಗಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೇ ರವಿವಾರದಂದು 18ನೇ ವರ್ಷಕ್ಕೆ ಕಾಲಿರಿಸಿರುವ ಆತನ ಸಹಚರ ಬಿಲಾಲ್ ಗಣಿ, ಕಳೆದ ವರ್ಷ ಒಂದು ಹತ್ಯೆ ಹಾಗೂ ಒಂದು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಗಣಿಯನ್ನು ಬಾಲಾಪರಾಧಿ ಕಾರಾಗೃಹಕ್ಕೆ ಕಳಿಸಲಾಗಿತ್ತಾದರೂ, ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದ ಆತ, ವೆಲ್ಡಿಂಗ್ ಶಾಪ್ ಒಂದರಲ್ಲಿ ಉದ್ಯೋಗ ಮಾಡುತ್ತಿದ್ದ.
ಇದಕ್ಕೂ ಮುನ್ನ ಮಾಯಾ ಗ್ಯಾಂಗ್ ನಿಂದ ಗುಂಡಿನ ದಾಳಿಗೆ ಒಳಗಾಗಿದ್ದ ಹರ್ಪ್ರೀತ್ ಗಿಲ್ ಸ್ಥಳದಲ್ಲೇ ಮೃತಪಟ್ಟರೆ, ಮಾಯಾನಿಂದ ತಲೆಗೆ ಗುಂಡೇಟು ತಿಂದಿದ್ದ ಗಿಲ್ ರ ಚಿಕ್ಕಪ್ಪ ಗೋವಿಂದ್ (32) ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
ಈ ಘಟನೆಗೆ ರಸ್ತೆಯಲ್ಲಿ ನಡೆದಿದ್ದ ಮಾತಿನ ಚಕಮಕಿ ಕಾರಣ ಎಂಬ ಸಂಗತಿ ಪೊಲೀಸರ ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿದೆ.