ಹತ್ರಾಸ್ ಕಾಲ್ತುಳಿತ ಪ್ರಕರಣ: ಸ್ವಘೋಷಿತ ದೇವಮಾನವ ʼಭೋಲೆ ಬಾಬಾʼ ಯಾರು?

Update: 2024-07-03 13:00 GMT

ಭೋಲೆ ಬಾಬಾ (Photo: indiatoday.in)

ಲಕ್ನೋ: ಮಂಗಳವಾರ ಹತ್ರಾಸ್‌ ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ನಡೆದ ಕಾಲ್ತುಲಿತದಲ್ಲಿ 120 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಈ ಧಾರ್ಮಿಕ ಕಾರ್ಯಕ್ರಮ ʼಸತ್ಸಂಗʼ ನಡೆಸುತ್ತಿದ್ದ ಭೋಲೆ ಬಾಬಾ ಈ ಹಿಂದೆ ಪೊಲೀಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದಾಗಿ ತಿಳಿದು ಬಂದಿದೆ. ಪೊಲೀಸ್ ಕೆಲಸ ಇಷ್ಟವಾಗದೇ ಸತ್ಸಂಗವನ್ನೇ ಪೂರ್ಣಕಾಲಿಕವಾಗಿ ಮಾಡತೊಡಗಿದ ಎಸ್ ಐ ಸೂರಜ್ ಪಾಲ್ ಸಿಂಗ್ ಯಾನೆ ‘ಭೋಲೆ ಬಾಬಾ’ ಕುರಿತ ಮಾಹಿತಿ ಇಲ್ಲಿದೆ.

ಉತ್ತರಪ್ರದೇಶದ ಹತ್ರಾಸ್‌ನಲ್ಲಿ ನಡೆದ ಭೋಲೆ ಬಾಬಾ ಸತ್ಸಂಗದ ಕಾಲ್ತುಳಿತ ಅವಘಡ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಪಘಾತದಲ್ಲಿ 120 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ.ಕಾಲ್ತುಳಿತಕ್ಕೆ ಕಾರಣರಾದ ಭೋಲೆ ಬಾಬಾ ಅವರ ಸತ್ಸಂಗ ವೃತ್ತಿ 15 ವರ್ಷಗಳ ಹಿಂದೆ ಪ್ರಾರಂಭವಾಗಿತ್ತು.

ಕಾಸ್‌ಗಂಜ್ ಜಿಲ್ಲೆಯ ಸೂರಜ್ ಪಾಲ್ ಸಿಂಗ್ ಪೊಲೀಸ್‌ ಇಲಾಖೆಯಲ್ಲಿ ಎಸ್‌ಐ ಆಗಿ ನಿಯೋಜನೆಗೊಂಡಿದ್ದವರು. ಆದರೆ ಆ ಕೆಲಸ ಹೆಚ್ಚು ಇಷ್ಟವಾಗದ ಕಾರಣ ಅವರು ಪೊಲೀಸ್ ವೃತ್ತಿ ತೊರೆದು ಭಕ್ತರ ಜನಪ್ರಿಯ ಭೋಲೆ ಬಾಬಾ ಆದರು.

ಭೋಲೆ ಬಾಬಾ ಎಂದು ಕರೆಯಲ್ಪಡುವ ಈ ಸಂತ ಕಳೆದ 15 ವರ್ಷಗಳಿಂದ ಹತ್ರಾಸ್‌ನಲ್ಲಿ ಸತ್ಸಂಗವನ್ನು ನೀಡುತ್ತಿದ್ದಾರೆ. ಪ್ರತಿ ವರ್ಷ ಅವರ ಸತ್ಸಂಗವನ್ನು ಜಿಲ್ಲೆಯ ವಿವಿಧ ತಹಸಿಲ್ ಪ್ರದೇಶಗಳಲ್ಲಿ ಆಯೋಜಿಸಲಾಗುತ್ತದೆ. ಕಾಸ್ಗಂಜ್‌ನ ಪಟಿಯಾಲಿ ನಿವಾಸಿಯಾಗಿರುವ ಭೋಲೆ ಬಾಬಾ 18 ವರ್ಷಗಳ ಹಿಂದೆ ಪೊಲೀಸ್ ಕೆಲಸ ತೊರೆದಿದ್ದರು. ಅಂದಿನಿಂದ ಅವರ ಸತ್ಸಂಗ ಕೂಟಗಳು ಪ್ರಾರಂಭವಾದವು.

ಹತ್ರಾಸ್‌ನಲ್ಲಿ ಭೋಲೆ ಬಾಬಾ ಸತ್ಸಂಗ ಪ್ರಾರಂಭವಾಗಿದ್ದು 15 ವರ್ಷಗಳ ಹಿಂದೆ. ಮೊದಲ ಬಾರಿಗೆ ಈ ಸತ್ಸಂಗವು ಕಛ್ಪುರದ ಬಳಿ ನಡೆಯಿತು. ಆ ವೇಳೆ ಮಥುರಾ-ಬರೇಲಿ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಪರಿಸ್ಥಿತಿ ಉಂಟಾಗಿತ್ತು. ಇದಾದ ಬಳಿಕ ಬಾಗಲ ಕಾಲೇಜು ಮೈದಾನದಲ್ಲಿ ಸತ್ಸಂಗ ಕಾರ್ಯಕ್ರಮ ಜರುಗಿತು. 50 ಸಾವಿರಕ್ಕೂ ಹೆಚ್ಚು ಅನುಯಾಯಿಗಳು ಅದರಲ್ಲಿ ಪಾಲ್ಗೊಂಡಿದ್ದರು. ನಂತರ ಇದು ಸಾಸ್ನಿ, ಸದಾಬಾದ್ ಮತ್ತು ಸಿಕಂದರರಾವ್ ತಹಸಿಲ್ ಪ್ರದೇಶಗಳಲ್ಲಿ ನಡೆಯಲು ಪ್ರಾರಂಭವಾಯಿತು.

ಸಿಕಂದರರಾವ್‌ನ ಫುಲ್ರೈನಲ್ಲಿ ನಡೆದ ಸತ್ಸಂಗಕ್ಕಿಂತ ಎರಡು ವರ್ಷಗಳ ಹಿಂದೆ ಸಸಾನಿಯಲ್ಲಿ ಈ ಸತ್ಸಂಗ ನಡೆದಿತ್ತು. ಸಾವಿರಾರು ಅನುಯಾಯಿಗಳು ಪಾಲ್ಗೊಂಡಿದ್ದರು.

ಈ ಪ್ರಸಿದ್ಧ ಭೋಲೆ ಬಾಬಾನ ನಿಜ ಹೆಸರು ಸೂರಜ್ ಪಾಲ್ ಸಿಂಗ್. ಸೂರಜ್ ಪಾಲ್ ಸಿಂಗ್ ಕಸಂಗಜ್ ಜಿಲ್ಲೆಯ ಪಟಿಯಾಲಿ ಗ್ರಾಮದ ನಿವಾಸಿ. ಜನರು ಅವರನ್ನು ಸಾಕಾರ್ ವಿಶ್ವ ಹರಿ, ಹರಿ ಭೋಲೆ ಬಾಬಾ ಎಂಬ ಹೆಸರಿನಿಂದ ಕರೆಯುತ್ತಾರೆ.

ಇವರು ಪಶ್ಚಿಮ ಉತ್ತರ ಪ್ರದೇಶದಲ್ಲಿ ಬಹಳ ಜನಪ್ರಿಯರಾಗಿದ್ದಾರೆ. ಅವರ ಸತ್ಸಂಗಗಳು ಎಲ್ಲೇ ನಡೆದರೂ, ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಿಂದ ಅನುಯಾಯಿಗಳು ಅಲ್ಲಿಗೆ ತಲುಪುತ್ತಾರೆ. ಪ್ರತಿ ನಗರ ಮತ್ತು ಹಳ್ಳಿಗಳಲ್ಲಿ ಅವರಿಗೆ ಸ್ವಯಂಸೇವಕರಿದ್ದಾರೆ. ಅವರ ಮೂಲಕವೇ ಅನುಯಾಯಿಗಳನ್ನು ಸತ್ಸಂಗ ತಾಣಕ್ಕೆ ಕರೆದೊಯ್ಯುವ ಕೆಲಸ ನಡೆಯುತ್ತದೆ.

ಎಸ್‌ ಪಿ ಸಿಂಗ್, ಉತ್ತರ ಪ್ರದೇಶ ಪೊಲೀಸ್‌ನಲ್ಲಿ ಎಸ್‌ಐ ಆಗಿರುವಾಗಲೇ ಜನರಿಗೆ ಸತ್ಸಂಗವನ್ನು ನೀಡತೊಡಗಿದರು. ಇದಾದ ಬಳಿಕ 2006ರಲ್ಲಿ ಪೊಲೀಸ್ ನೌಕರಿಯಿಂದ ವಿಆರ್‌ಎಸ್ ಪಡೆದು ಗ್ರಾಮಕ್ಕೆ ಬಂದಿದ್ದರು.

ಆಮೇಲೆ ಹಳ್ಳಿ ಹಳ್ಳಿಗೆ ಹೋಗಿ ಸತ್ಸಂಗ ಕೊಡತೊಡಗಿದರು. ಜನರಿಂದ ದೇಣಿಗೆ ಬರಲಾರಂಭಿಸಿದಂತೆ ಈ ಕಾರ್ಯಕ್ರಮ ದೊಡ್ಡದಾಗುತ್ತಾ ಹೋಯಿತು. ಪಟಿಯಾಲಿಯಲ್ಲಿ ಇವರ ದೊಡ್ಡ ಆಶ್ರಮವನ್ನೂ ನಿರ್ಮಿಸಲಾಗಿದೆ. ಪೂಜೆ ಸಲ್ಲಿಸಲು ಜನರು ಸಹ ಅಲ್ಲಿಗೆ ತಲುಪುತ್ತಾರೆ. ಈಗ ಈ ಬಾಬಾನ ಸತ್ಸಂಗದಲ್ಲೇ ದೊಡ್ಡದೊಂದು ಅವಘಡ ನಡೆದು ಹೋಗಿದೆ. ನೂರಿಪ್ಪತ್ತು ಜನ ಬಲಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News