ಬಿಎಚ್‌ಯು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ಆರೋಪಿಗಳ ಸೊತ್ತುಗಳ ಮೇಲೆ ಬುಲ್ಡೋಜರ್ ಹರಿಸಲು ಎಷ್ಟು ಸಮಯ ಬೇಕಾಗುತ್ತದೆ ?: ಮಹುವಾ ಮೊಯಿತ್ರಾ
ಲಕ್ನೊ: ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ (ಬಿಎಚ್ ಯು)ದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಸ್ಥಳೀಯ ನಾಯಕರು ಭಾಗಿಯಾಗಿರುವ ಆರೋಪದ ಕುರಿತಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ತೃಣಮೂಲ ಕಾಂಗ್ರೆಸ್ ಸದಸ್ಯೆ ಮಹುವಾ ಮೊಯಿತ್ರಾ, ಆರೋಪಿಗಳ ಸೊತ್ತುಗಳ ಮೇಲೆ ಬುಲ್ಡೋಜರ್ ಹರಿಸಲು ಎಷ್ಟು ಸಮಯ ಬೇಕಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.
‘‘ಕೆಡವಿ ಹಾಕಿ ಸರ್, ಬುಲ್ಡೋಜರ್ ಚಲಾಯಿಸಲು ಇಷ್ಟು ವಿಳಂಬ ಯಾಕೆ?’’ ಎಂದು ಅಮಾನತುಗೊಂಡ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತನ್ನ ‘ಎಕ್ಸ್’ನಲ್ಲಿ ಬರೆದಿದ್ದಾರೆ. ಅಲ್ಲದೆ, ಯೋಗಿ ಆದಿತ್ಯನಾಥ್ ಅವರೊಂದಿಗೆ ಆರೋಪಿಗಳು ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಯೋಗಿ ಆದಿತ್ಯನಾಥ್ ಅವರು ಸಂದರ್ಶನವೊಂದರಲ್ಲಿ, ಯಾರಾದರೂ ಅಪರಾಧ ಎಸಗಿದರೆ, ಗುಂಡು ಹಾರಿಸಿ ಹತ್ಯೆಗೈಯಲಾಗುವುದು ಎಂದು ಹೇಳಿದ್ದರು.
ಉತ್ತರಪ್ರದೇಶದ ಐಐಟಿ-ಬಿಎಚ್ ಯು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ ಘಟನೆ ನಡೆದ ಎರಡು ತಿಂಗಳ ಬಳಿಕ ಪೊಲೀಸರು ರವಿವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಗಳು ಬಿಜೆಪಿಯ ಪದಾಧಿಕಾರಿಗಳು ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಇದರೊಂದಿಗೆ ಈ ಮೂವರು ಆರೋಪಿಗಳು ಪೇಸ್ಬುಕ್ ಪೇಜ್ ನಲ್ಲಿ ತಾವು ಬಿಜೆಪಿ ಐಟಿ ಸೆಲ್ ಸದಸ್ಯರು ಎಂದು ಪ್ರತಿಪಾದಿಸಿದ್ದಾರೆ.