ಬಿಹಾರ: ಪರೀಕ್ಷೆ ಬರೆಯಲು ತೆರಳಿದ್ದ ಕಾಲೇಜು ವಿದ್ಯಾರ್ಥಿಯ ಥಳಿಸಿ ಹತ್ಯೆ
ಪಾಟ್ನಾ: ಇಪ್ಪತ್ತೆರೆಡು ವರ್ಷದ ವಿದ್ಯಾರ್ಥಿಯೋರ್ವನನ್ನು ಮುಸುಕುಧಾರಿ ವ್ಯಕ್ತಿಗಳು ಥಳಿಸಿ ಹತ್ಯೆಗೈದ ಘಟನೆ ಇಲ್ಲಿನ ಕಾಲೇಜೊಂದರ ಕ್ಯಾಂಪಸ್ನಲ್ಲಿ ಮಂಗಳವಾರ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಬಿಎನ್ ಕಾಲೇಜಿನ ವೊಕೇಶನಲ್ ಇಂಗ್ಲೀಷ್ನ ಮೂರನೇ ವರ್ಷದ ವಿದ್ಯಾರ್ಥಿ ಹರ್ಷ ರಾಜ್ ಎಂದು ಗುರುತಿಸಲಾಗಿದೆ.
ಹರ್ಷ ರಾಜ್ ಅವರು ಪರೀಕ್ಷೆ ಬರೆಯಲು ಮಂಗಳವಾರ ಸುಲ್ತಾನ್ ಗಂಜ್ ನ ಕಾನೂನು ಕಾಲೇಜಿಗೆ ತೆರಳಿದ್ದಾಗ ಮುಸುಕುಧಾರಿ ವ್ಯಕ್ತಿಗಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಹರ್ಷರಾಜ್ ಅವರು ಗಂಭೀರ ಗಾಯಗೊಂಡರು. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಕಳೆದ ವರ್ಷ ನಡೆದ ದಸರಾದ ಸಂದರ್ಭ ನಡೆದ ದಾಂಡಿಯಾ ಕಾರ್ಯಕ್ರಮದಲ್ಲಿ ನಡೆದ ವಾಗ್ವಾದ ಈ ದಾಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತಂತೆ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ-ಜೆಡಿಯು ನೇತೃತ್ವದ ಸರಕಾರವನ್ನು ಪ್ರತಿಪಕ್ಷ ತರಾಟೆಗೆ ತೆಗೆದುಕೊಂಡಿದೆ.
ಆರೋಪಿಯ ಬಂಧನ
ಬಿಎನ್ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಧಾನ ಶಂಕಿತನನ್ನು ಬಿಹಾರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಆರೋಪಿಯನ್ನು ಪಾಟ್ನಾ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಪಾಟ್ನಾದ ಬಿಹ್ಟಾದ ನಿವಾಸಿ.