ಪ್ರಾರ್ಥನಾ ಸ್ಥಳಗಳ ಕಾಯ್ದೆ ರದ್ದತಿಗೆ ಬಿಜೆಪಿ ಆಗ್ರಹ
ಹೊಸದಿಲ್ಲಿ: ಹಿಂದೂ, ಸಿಕ್ಖರು, ಜೈನರು ಮತ್ತು ಬೌದ್ಧರಿಗೆ ಸಂವಿಧಾನ ಒದಗಿಸಿದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವ ಪ್ರಾರ್ಥನಾ ಸ್ಥಳಗಳ ಕಾಯ್ದೆ-1991ನ್ನು ರದ್ದುಪಡಿಸಬೇಕು ಎಂದು ಬಿಜೆಪಿ ಸಂಸದ ಹರನಾಥ್ ಸಿಂಗ್ ಯಾದವ್ ಸೋಮವಾರ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.
ಈ ಶಾಸನ ಯಾವುದೇ ಪ್ರಾರ್ಥನಾ ಸ್ಥಳಗಳನ್ನು ಪರಿವರ್ತಿಸುವುದನ್ನು ನಿಷೇಧಿಸುತ್ತದೆ ಹಾಗೂ 1947ರ ಆಗಸ್ಟ್ 15ರ ವೇಳೆಗೆ ಇದ್ದ ಪ್ರಾರ್ಥನಾ ಸ್ಥಳದಲ್ಲಿ ಯಾವುದೇ ಧಾರ್ಮಿಕ ದತ್ತಿ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡುತ್ತದೆ.
"ಧಾರ್ಮಿಕ ಸ್ಥಳಗಳ ಕಾಯ್ದೆ ಸಂಪೂರ್ಣ ಅತಾರ್ಕಿಕ ಮತ್ತು ಅಸಂವಿಧಾನಿಕ. ಇದು ಹಿಂದೂಗಳು, ಸಿಕ್ಖರು, ಬೌದ್ಧರು ಮತ್ತು ಜೈನರಿಗೆ ಸಂವಿಧಾನದ ಅಡಿಯಲ್ಲಿ ನೀಡಿರುವ ಧಾರ್ಮಿಕ ಹಕ್ಕನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುತ್ತದೆ. ಇದು ದೇಶದಲ್ಲಿ ಕೋಮು ಸಾಮರಸ್ಯಕ್ಕೆ ಕೂಡಾ ಧಕ್ಕೆ ಮಾಡುತ್ತಿದೆ. ಆದ್ದರಿಂದ ದೇಶದ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಕಾನೂನನ್ನು ತಕ್ಷಣ ರದ್ದುಪಡಿಸಬೇಕು" ಎಂದು ಅವರು ರಾಜ್ಯಸಭೆಯಲ್ಲಿ ಶೂನ್ಯವೇಳೆಯಲ್ಲಿ ನಡೆದ ಚರ್ಚೆಯಲ್ಲಿ ಆಗ್ರಹ ಮಂಡಿಸಿದರು. ಈ ಕಾನೂನು ಅತಾರ್ತಿಕವಾದ ಗಡುವನ್ನು ನಿರ್ದಿಷ್ಟಪಡಿಸಿದೆ ಎಂದು ಅವರು ಆಪಾದಿಸಿದರು.