ಉತ್ತರ ಪ್ರದೇಶದ 72 ಕ್ಷೇತ್ರಗಳಲ್ಲಿ ಬಿಜೆಪಿಗೆ ಕಳೆದ ಸಲಕ್ಕಿಂತ ಕಡಿಮೆ ಮತ
ಲಕ್ನೋ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಾನಗಳ ಸಂಖ್ಯೆ ಗಣನೀಯವಾಗಿ ಕುಸಿದಿರುವುದು ಮಾತ್ರವಲ್ಲದೇ ಮತಗಳಿಕೆ ಕೂಡಾ ಭಾರಿ ಕುಸಿತ ಕಂಡಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಶೇಕಡ 49.6ರಷ್ಟು ಮತಗಳನ್ನು ಪಡೆದಿದ್ದರೆ ಈ ಬಾರಿ ಇದು ಶೇಕಡ 41.4ಕ್ಕೆ ಕುಸಿದಿದೆ.
ಎರಡೂ ಬಾರಿ ಬಿಜೆಪಿ 75 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಈ ಪೈಕಿ 72 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕಳೆದ ಬಾರಿಗಿಂತ ಈ ಬಾರಿ 2.2 ಲಕ್ಷವರೆಗೂ ಮತಗಳು ಕಡಿಮೆಯಾಗಿವೆ. ಒಟ್ಟಾರೆಯಾಗಿ ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಚಲಾವಣೆಯಾದ ಮತಗಳ ಸಂಖ್ಯೆ ಹೆಚ್ಚಿದರೂ ಬಿಜೆಪಿ ಮತಗಳಿಕೆ 65 ಲಕ್ಷದಷ್ಟು ಕುಸಿದಿದೆ.
ಪ್ರಧಾನಿ ಮೋದಿ ಜಯ ಗಳಿಸಿದ ವಾರಣಾಸಿ, ಯೋಗಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖ್ಪುರ, ರಾಜನಾಥ್ ಸಿಂಗ್ ಅವರ ಲಕ್ನೋ ಮತ್ತು ಫೈಝಾಬಾದ್ ನಲ್ಲೂ ಬಿಜೆಪಿ ಕಡಿಮೆ ಮತಗಳನ್ನು ಪಡೆದಿದೆ.
ರಾಷ್ಟ್ರರಾಜಧಾನಿ ಪ್ರದೇಶದ ಗೌತಮ ಬುದ್ಧ ನಗರ, ಬರೇಲಿ ಮತ್ತು ಕೌಶಂಬಿ ಕ್ಷೇತ್ರಗಳಲ್ಲಿ ಮಾತ್ರ ಕಳೆದ ಬಾರಿಗಿಂತ ಹೆಚ್ಚಿನ ಮತಗಳನ್ನು ಪಡೆಯುಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಕ್ಷೇತ್ರಗಳಲ್ಲೂ ಬರೇಲಿಯಲ್ಲಿ ಮತಗಳಿಕೆ ಪ್ರಮಾಣ 2019ಕ್ಕಿಂತ ಕಡಿಮೆ. ಉಳಿದ ಎರಡು ಕ್ಷೇತ್ರಗಳಲ್ಲಿ ತುಸು ಹೆಚ್ಚು ಮತಗಳನ್ನು ಪಡೆಯುವಲ್ಲಿ ಕೇಸರಿ ಪಕ್ಷ ಸಫಲವಾಗಿದೆ.
ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಚಲಾವಣೆಯಾದ ಒಟ್ಟು 8.6 ಕೋಟಿ ಮತಗಳ ಪೈಕಿ ಸುಮಾರು 4.3 ಕೋಟಿ ಮತಗಳನ್ನು ಬಿಜೆಪಿ ಪಡೆದಿತ್ತು. ಆದರೆ ಈ ಬಾರಿ 8.8 ಕೋಟಿ ಚಲಾಯಿತ ಮತಗಳ ಪೈಕಿ ಕೇವಲ 3.6 ಕೋಟಿ ಮತಗಳನ್ನು ಆಕರ್ಷಿಸಲು ಮಾತ್ರ ಸಾಧ್ಯವಾಗಿದೆ. ಅಂದರೆ ಪ್ರತಿ ಕ್ಷೇತ್ರಗಳಲ್ಲಿ ಸರಾಸರಿ 67 ಸಾವಿರ ಕಡಿಮೆ ಮತಗಳನ್ನು ಬಿಜೆಪಿ ಪಡೆದಂತಾಗಿದೆ.
ಒಟ್ಟು 75 ಕ್ಷೇತ್ರಗಳ ಪೈಕಿ 12ರಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಯ ಮತ ಇಳಿಕೆ ಪ್ರಮಾಣ 1 ಲಕ್ಷಕ್ಕಿಂತಲೂ ಅಧಿಕ. ಇದರಲ್ಲಿ ಪಶ್ಚಿಮದ ಮಥುರಾ, ಅಲೀಗಢ, ಮುಜಾಫರ್ ನಗರ ಮತ್ತು ಫತೇಪುರ ಸಿಕ್ರಿ ಹಾಗೂ ಪೂರ್ವದ ಗೋರಖ್ಪುರ ಸೇರಿದೆ. ಇನ್ನು 36 ಕ್ಷೇತ್ರಗಳಲ್ಲಿ ಇಳಿಕೆ ಪ್ರಮಾಣ 50 ಸಾವಿರದಿಂದ ಒಂದು ಲಕ್ಷದಷ್ಟಿದೆ. ಅಮೇಥಿ, ರಾಯಬರೇಲಿ, ಅಲಹಾಬಾದ್, ಗಾಝಿಯಾಬಾದ್, ಮೈನ್ಪುರಿ ಮತ್ತು ವಾರಣಾಸಿ ಇದರಲ್ಲಿ ಸೇರಿದೆ. ಕಳೆದ ಸಲಕ್ಕೆ ಹೋಲಿಸಿದರೆ ಪ್ರಧಾನಿ ನರೇಂದ್ರ ಮೋದಿ ಈ ಬಾರಿ 60 ಸಾವಿರ ಕಡಿಮೆ ಮತಗಳನ್ನು ಪಡೆದಿದ್ದಾರೆ.