ರಾಹುಲ್ ಗಾಂಧಿ ಕಾರ್ಯಕ್ರಮದ ವೇದಿಕೆಯ ಬ್ಯಾನರ್ ನಲ್ಲಿ ಬಿಜೆಪಿ ಸಚಿವರ ಭಾವಚಿತ್ರ!
ಭೋಪಾಲ್ : ಮಧ್ಯಪ್ರದೇಶದ ಮಾಂಡ್ಲಾ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ರಾಹುಲ್ ಗಾಂಧಿ ಅವರ ರ‍್ಯಾಲಿಯ ಹಿನ್ನೆಲೆಯಲ್ಲಿ ನಡೆಯಲಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ಕೇಂದ್ರ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ಫಗ್ಗನ್ ಸಿಂಗ್ ಕುಲಸ್ಥೆ ಅವರ ಭಾವಚಿತ್ರ ಇರುವ ಬ್ಯಾನರ್ ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಕಾಂಗ್ರೆಸ್ ನಾಯಕರು ತೀವ್ರ ಮುಜುಗರಕ್ಕೀಡಾಗಿದ್ದಾರೆ.
ಮಾಂಡ್ಲಾ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸಿಯೋನಿ ಜಿಲ್ಲಾ ಕೇಂದ್ರದಿಂದ 80 ಕಿ.ಮೀ. ದೂರದಲ್ಲಿರುವ ಧನೋರಾದಲ್ಲಿ ಸಂಜೆ ನಿಗದಿಯಾಗಿದ್ದ ರ‍್ಯಾಲಿಯ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್ ನಲ್ಲಿ ಕುಲಸ್ಥೆ ಅವರ ಭಾವಚಿತ್ರ ಇರುವುದನ್ನು ವೀಡಿಯೊ ಪ್ರದರ್ಶಿಸಿದೆ.
ವೀಡಿಯೊದಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರ ಸಚಿವ ಕುಲಸ್ಥೆ ಅವರ ಭಾವಚಿತ್ರದ ಮೇಲೆ ಕಾಂಗ್ರೆಸ್ನ ಕಿಯೋಲರಿ ವಿಧಾನ ಸಭಾ ಕ್ಷೇತ್ರದ ಶಾಸಕ ರಜನೀಶ್ ಹರವಂಶ ಸಿಂಗ್ ಅವರ ಭಾವಚಿತ್ರವನ್ನು ಅಳವಡಿಸುವ ಮೂಲಕ ಮರೆಮಾಚುತ್ತಿರುವುದು ದಾಖಲಾಗಿದೆ.
‘‘ಇದು ಕಾಂಗ್ರೆಸ್ ಗಂಭೀರತೆ ಎಷ್ಟಿದೆ ಎಂಬುದನ್ನು ತೋರಿಸಿದೆ. ಅವರು ತಮ್ಮ ಅಭ್ಯರ್ಥಿಯ ಭಾವಚಿತ್ರವನ್ನು ಅಳವಡಿಸುವ ಬದಲು ಬಿಜೆಪಿ ಅಭ್ಯರ್ಥಿ ಕುಲಸ್ಥೆ ಅವರ ಭಾವಚಿತ್ರವನ್ನು ಅಳವಡಿಸಿದ್ದಾರೆ. ಆ ಮೂಲಕ ಚುನಾವಣೆಯ ಮುನ್ನವೇ ಸೋಲು ಒಪ್ಪಿಕೊಂಡಿದ್ದಾರೆ’’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ.
ಇದು ಮಾನವ ದೋಷದಿಂದ ಸಂಭವಿಸಿದೆ. ಆದರೆ, ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವುದನ್ನು ಬಿಜೆಪಿ ರೂಢಿ ಮಾಡಿಕೊಂಡಿದೆ. ಬಿಜೆಪಿಯವರ ಇಂತಹ ಅಭ್ಯಾಸದ ಕುರಿತು ನಾವೇನೂ ಹೇಳಲಾರೆವು ಎಂದು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕೆ.ಕೆ. ಕೃಷ್ಣ ಹೇಳಿದ್ದಾರೆ.