ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪ್ರಕರಣ: ಬಿಜೆಪಿ ಶಾಸಕನಿಗೆ ಎರಡು ವರ್ಷ ಜೈಲು ಶಿಕ್ಷೆ

Update: 2024-01-06 08:46 GMT

ಬಿಜೆಪಿ ಶಾಸಕ ಸುರೇಶ್ವರ್‌ ಸಿಂಗ್‌ (Photo credit: news18.com)

ಲಕ್ನೋ: ಬೆದರಿಕೆಯೊಡ್ಡಿದ್ದೇ ಅಲ್ಲದೆ ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಮಾಡಿದ 21 ವರ್ಷ ಹಳೆಯ ಪ್ರಕರಣದಲ್ಲಿ ಬಹರೈಚ್‌ನ ಎಂಪಿ-ಎಂಎಲ್‌ಎ ನ್ಯಾಯಾಲಯವು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಶ್ವರ್‌ ಸಿಂಗ್‌ಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ರೂ. 2‌,500 ದಂಡ ವಿಧಿಸಿದ ನಂತರ ಶಾಸಕ ಈಗ ಅನರ್ಹತೆಯ ಭೀತಿ ಎದುರಿಸುತ್ತಿದ್ದಾರೆ.

ಬಹರೈಚ್‌ ಜಿಲ್ಲೆಯ ಮಹಸಿ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಸಿಂಗ್‌ ಅವರನ್ನು ಐಪಿಸಿ ಸೆಕ್ಷನ್‌ 506, 353 ಅನ್ವಯ ಅಪರಾಧಿ ಎಂದು ಘೋಷಿಸಲಾಗಿದೆ. ನ್ಯಾಯಾಲಯ ಅವರಿಗೆ ಜಾಮೀನು ಒದಗಿಸಿದ್ದು ಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಶಾಸಕರ ವಕೀಲರು ಹೇಳಿದ್ದಾರೆ.

ಸೆ. 2, 2002ರಂದು ನಡೆದ ಪ್ರಕರಣದಲ್ಲಿ ಲಕ್ನೋದ ಆಶ್ರಯತಾಣದಲ್ಲಿರುವ ಮಹಿಳೆಯೊಬ್ಬಳ ಹೇಳಿಕೆ ದಾಖಲಿಸಿಕೊಳ್ಳಲು ಆಕೆಯನ್ನು ಸಬ್-ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ ಕಚೇರಿಗೆ ಕರೆದುಕೊಂಡು ಬರಲಾಗಿತ್ತು ಹಾಗೂ ಈ ಸಂದರ್ಭ ಬೇರೆ ಯಾರಿಗೂ ಪ್ರವೇಶವಿಲ್ಲದೇ ಇದ್ದರೂ ಸಿಂಗ್‌ ಅಲ್ಲಿಗೆ ಬಲವಂತವಾಗಿ ಒಳಪ್ರವೇಶಿಸಿದ್ದರು. ಅಷ್ಟೇ ಅಲ್ಲದೆ ಅಧಿಕಾರಿಗಳೊಂದಿಗೆ ದುರ್ವರ್ತನೆ ತೋರಿ ಬೆದರಿಕೆಯನ್ನೂ ಒಡ್ಡಿದ್ದರೆಂದು ಆರೋಪಿಸಲಾಗಿತ್ತು.

ಯಾವುದೋ ವಿಚಾರ ಚರ್ಚೆಗೆಂದು ಅಂದು ಸಿಂಗ್‌ ಎಸ್‌ಡಿಎಂ ಕಚೇರಿಗೆ ಬಂದಿದ್ದರು. ಈ ಘಟನೆಯ ನಂತರ ಅವರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಅವರು ದಂಡ ಪಾವತಿಸಲು ವಿಫಲರಾದರೆ ಏಳು ದಿನ ಹೆಚ್ಚು ಜೈಲು ಶಿಕ್ಷೆ ಅನುಭವಿಸಬೇಕಿದೆ.

2019ರಲ್ಲಿ ಬಹರೈಚ್‌ನ ಸೆಷನ್ಸ್‌ ನ್ಯಾಯಾಲಯ ಸಿಂಗ್‌ ಮತ್ತು ಇತರ ಮೂವರನ್ನು 1995ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಆದರೆ ಸಿಂಗ್‌ ಸಹೋದರ ಬ್ರಿಜೇಶ್ವರ್‌ ಸಿಂಗ್‌ ಮತ್ತು ಇತರ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಇಲ್ಲಿಯ ತನಕ ಉತ್ತರ ಪ್ರದೇಶದ ನಾಲ್ಕು ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News