ದಾನಿಶ್ ಅಲಿಯನ್ನು ಭಯೋತ್ಪಾದಕ ಎಂದು ಜರಿದ ಬಿಜೆಪಿ ಸಂಸದ: ತೀವ್ರ ವಿವಾದಕ್ಕೆ ಕಾರಣವಾದ ಹರ್ಷವರ್ಧನ್ ಮುಗುಳ್ನಗೆ
ಹೊಸದಿಲ್ಲಿ: ಭಾರತೀಯ ಸಂಸದೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ದುರದೃಷ್ಟಕರ ಘಟನೆಯೊಂದು ನಡೆದಿದ್ದು, ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು ಉತ್ತರ ಪ್ರದೇಶದ ಅಮ್ರೋಹ ಲೋಕಸಭಾ ಕ್ಷೇತ್ರದ ಬಿಎಸ್‍ಪಿ ಸಂಸದ ದಾನಿಶ್ ಅಲಿ ವಿರುದ್ಧ ನಿಂದನಾತ್ಮಕ ದಾಳಿ ನಡೆಸಿದ್ದಾರೆ. ಈ ಆಘಾತಕಾರಿ ಘಟನೆಯು ಗುರುವಾರ ಸಂಸದೀಯ ಕಾರ್ಯಕಲಾಪ ಸಂದರ್ಭದಲ್ಲಿ ನಡೆದಿದೆ.
ದಾನಿಶ್ ಅಲಿ ವಿರುದ್ಧ ನಿಂದನಾತ್ಮಕ ದಾಳಿ ನಡೆಸಿದ ಬಿಜೆಪಿ ಸಂಸದ ರಮೇಶ್ ಬಿಧೂರಿ, ಅವರನ್ನು ‘ಮುಸ್ಲಿಂ ಉಗ್ರವಾದಿ, ತಲೆಹಿಡುಕ, ಸುನ್ನತಿ ಮಾಡಿಸಿಕೊಂಡವ ಎಂದೆಲ್ಲ ಸರಣಿಯೋಪಾದಿಯಾಗಿ ವಾಗ್ದಾಳಿ ನಡೆಸಿದರು. ಮತ್ತೊಂದು ತೀವ್ರ ನಿಂದನಾತ್ಮಕ ದಾಳಿಯಲ್ಲಿ, “ಯೆ ಮುಲ್ಲಾ ಆತಂಕ್ ವಾದಿ ಹೈ, ಬಾಹರ್ ಫೇಕೊ ನಾ ಇಸ್ ಮುಲ್ಲೆ ಕೊ” (ಈ ಮುಲ್ಲಾ ಭಯೋತ್ಪಾದಕನಾಗಿದ್ದಾನೆ. ಈ ಮುಲ್ಲಾನನ್ನು ಆಚೆಗೆ ಎಸೆಯಿರಿ) ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಅವರ ಪಕ್ಕದಲ್ಲೇ ಕುಳಿತಿದ್ದ ಡಾ. ಹರ್ಷವರ್ಧನ್ ಅವರ ಮಾತನ್ನು ಅನುಮೋದಿಸುವಂತೆ ಮುಗುಳ್ನಗುತ್ತಿರುವುದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ಸಂಸದ ರಮೇಶ್ ಬಿಧೂರಿ, ದಾನಿಶ್ ಅಲಿ ವಿರುದ್ಧ ನಡೆಸಿರುವ ವೈಯಕ್ತಿಕ ನಿಂದನಾತ್ಮಕ ದಾಳಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಮಾಜಿ ಕೇಂದ್ರ ಸಚಿವರೂ ಆದ ಡಾ. ಹರ್ಷವರ್ಧನ್, “ರಮೇಶ್ ಬಿಧೂರಿ ಏನು ಮಾತನಾಡಿದರು ಎಂದು ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ” ಎಂದು ಸಮಜಾಯಿಷಿ ನೀಡಿದ್ದಾರೆ.
ನನ್ನ ರಾಜಕೀಯ ದಾಖಲೆಯನ್ನು ನೋಡಿದರೆ, ನಾನು ಮುಸ್ಲಿಂ ಸಮುದಾಯದೊಂದಿಗೆ ನನ್ನ ಸಾರ್ವಜನಿಕ ಜೀವನದುದ್ದಕ್ಕೂ ನಿಕಟವಾಗಿ ಒಡನಾಡಿರುವುದು ಕಂಡು ಬರುತ್ತದೆ. ನಾನು ಚಾಂದಿನಿ ಚೌಕದಲ್ಲಿ ಮುಸ್ಲಿಂ ಗೆಳೆಯರೊಂದಿಗೆ ಆಡುತ್ತಾ ಬೆಳೆದಿದ್ದೇನೆ. ನಾನು ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಬದ್ಧನಾಗಿದ್ದೇನೆ. ನನ್ನ ವರ್ಚಸ್ಸನ್ನು ಹಾಳು ಮಾಡಲು ಕೆಲವು ನಕಾರಾತ್ಮಕ ಹಾಗೂ ಪಟ್ಟಭದ್ರ ಶಕ್ತಿಗಳು ಕಲ್ಪಿತ ಕತೆಗಳ ಮೂಲಕ ಪ್ರಯತ್ನಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಈ ನಡುವೆ, ಗುರುವಾರದ ಸಂಸದೀಯ ಕಲಾಪದ ಕುರಿತು X ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಮುಹಮ್ಮದ್ ಝಬೇರ್, ಬಿಜೆಪಿ ಸಂಸದ @rameshbidhuri ಸಂಸದ ಡ್ಯಾನಿಶ್ ಅಲಿಯನ್ನು ‘ತಲೆಹಿಡುಕ, “ಸುನ್ನತಿ ಮಾಡಿಸಿಕೊಂಡಿರುವವ’, ‘ಮುಲ್ಲಾ’, ‘ಭಯೋತ್ಪಾದಕ’ ಹಾಗೂ ‘ಉಗ್ರವಾದಿ’ ಎಂದು ಲೋಕಸಭೆಯಲ್ಲಿ ನಿಂದಿಸಿರುವುದು ದಾಖಲಾಗಿದೆ. ಈ ಸಂದರ್ಭದಲ್ಲಿ ಅವರ ಪಕ್ಕ ಕುಳಿತಿರುವ ರವಿಶಂಕರ್ ಪ್ರಸಾದ್ ಹಾಗೂ ಹರ್ಷವರ್ಧನ್ ಅವರ ಮಾತಿಗೆ ಮುಗುಳ್ನಗುತ್ತಿದ್ದಾರೆ ಎಂದು ಬರೆದಿದ್ದು, ಆ ಸಂದರ್ಭದ ಸಂಸದೀಯ ಕಲಾಪದ ದೃಶ್ಯಾವಳಿಯನ್ನು ಹಂಚಿಕೊಂಡಿದ್ದಾರೆ.
ಸಂಸತ್ ಕಲಾಪದಲ್ಲೇ ಸಂಸದನೋರ್ವನನ್ನು ನಿಂದಿಸಿರುವ ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರ ನಡೆಯು ತೀವ್ರ ಆಕ್ರೋಶಕ್ಕೆ ಗುರಿಯಾಗಿದೆ.
ಈ ನಡುವೆ, ಒಂದು ವೇಳೆ ನನ್ನ ಮೇಲಿನ ಆರೋಪಗಳು ರುಜುವಾತಾದರೆ, ನಾನು ರಾಜಕೀಯ ಜೀವನವನ್ನೇ ತೊರೆಯುವ ಯೋಚನೆ ಮಾಡುತ್ತೇನೆ ಎಂದು ಬಿಎಸ್‍ಪಿ ಸಂಸದ ದಾನಿಶ್ ಅಲಿ ಸವಾಲೆಸೆದಿದ್ದಾರೆ.