ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪರಿಸ್ಥಿತಿ ತುಂಬಾ ಕೆಟ್ಟದಾಗಿದ್ದು, ಸರಕಾರ ರಚಿಸುವ ಸ್ಥಿತಿಯಲ್ಲಿಲ್ಲ ಎಂದ ಪಕ್ಷದ ಶಾಸಕ

Update: 2024-07-14 15:54 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಪ್ರಮುಖ ನಿರ್ಧಾರಗಳು ಮತ್ತು ಬಿಜೆಪಿಯ ಕೇಂದ್ರ ನಾಯಕತ್ವದ ಮಧ್ಯಪ್ರವೇಶದ ಅಗತ್ಯಕ್ಕೆ ಶನಿವಾರ ಒತ್ತು ನೀಡಿದ ಪಕ್ಷದ ಬದ್ಲಾಪುರ (ಜೌನಪುರ ಜಿಲ್ಲೆ) ಶಾಸಕ ರಮೇಶಚಂದ್ರ ಮಿಶ್ರಾ ಅವರು, ಉತ್ತರ ಪ್ರದೇಶದಲ್ಲಿ ಬಿಜೆಪಿಯ ಪರಿಸ್ಥಿತಿ ತುಂಬ ಕೆಟ್ಟದಾಗಿದೆ ಮತ್ತು ಪ್ರಸ್ತುತ ಪಕ್ಷವು ಸರಕಾರವನ್ನು ರಚಿಸುವ ಸ್ಥಿತಿಯಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಸಮಾಜವಾದಿ ಪಾರ್ಟಿ (ಎಸ್‌ಪಿ)ಯ ದಾರಿ ತಪ್ಪಿಸುವ ತಂತ್ರಗಳು ಮತ್ತು ಅದರ ಪಿಡಿಎದ (ಪಿಛಡಾ ಅಥವಾ ಹಿಂದುಳಿದ ವರ್ಗಗಳು,ದಲಿತರು ಮತ್ತು ಅಲ್ಪಸಂಖ್ಯಾತರು) ಓಲೈಕೆ ತಳಮಟ್ಟದಲ್ಲಿ ಮತದಾರರನ್ನು ಸೆಳೆಯುತ್ತಿವೆ ಎಂದು ಮಿಶ್ರಾ ಹೇಳಿದರು.

2024ರ ಲೋಕಸಭಾ ಚುನಾವಣಾ ಫಲಿತಾಂಶಗಳನ್ನು ಚರ್ಚಿಸಲು ರವಿವಾರ ಲಕ್ನೋದಲ್ಲಿ ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯ ಮುನ್ನಾ ದಿನ ಮಿಶ್ರಾರ ಈ ಹೇಳಿಕೆ ಹೊರಬಿದ್ದಿದೆ.

‘ಇಂದು ರಾಜ್ಯದಲ್ಲಿ ಬಿಜೆಪಿಯ ಪರಿಸ್ಥಿತಿ ಚೆನ್ನಾಗಿಲ್ಲ. ಅದನ್ನು ಸುಧಾರಿಸಬಹುದು,ಅದಕ್ಕಾಗಿ ಕೇಂದ್ರ ನಾಯಕತ್ವವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಅದು 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳ ಮೇಲೆ ಗಮನವನ್ನು ಕೇಂದ್ರೀಕರಿಸಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರು,ನಾಯಕರು ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡಬೇಕಿದೆ. ಆಗ ಮಾತ್ರ ನಾವು 2027ರಲ್ಲಿ ಸರಕಾರವನ್ನು ರಚಿಸಬಹುದು. ಪ್ರಸಕ್ತ ಸನಿವೇಶದಲ್ಲಿ ನಮ್ಮ ಸ್ಥಿತಿ ಅತ್ಯಂತ ಕೆಟ್ಟದಾಗಿದೆ. ನಾವು ಸರಕಾರವನ್ನು ರಚಿಸುವ ಸ್ಥಿತಿಯಲ್ಲಿಲ್ಲ ’ ಎಂದು ಮಿಶ್ರಾ ಹೇಳಿದರು. ಅವರ ಈ ಹೇಳಿಕೆಯ ವೀಡಿಯೊ ವೈರಲ್ ಆಗಿದೆ.

ತನ್ನ ಹೇಳಿಕೆಯ ಕುರಿತು ಕೋಲಾಹಲವುಂಟಾದ ಬಳಿಕ ಇನ್ನೊಂದು ವೀಡಿಯೊವನ್ನು ಬಿಡುಗಡೆಗೊಳಿಸಿರುವ ಮಿಶ್ರಾ,ಕೇಂದ್ರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರ ಅದ್ಭುತ ಜನಪರ ಕಾರ್ಯಗಳನ್ನು ಮಾಡುತ್ತಿದೆ ಮತ್ತು 2027ರಲ್ಲಿ ಪಕ್ಷದ ಸರಕಾರ ರಚನೆಯಾಗಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭಾರೀ ಆಘಾತವನ್ನು ಅನುಭವಿಸಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಕೇವಲ 36 ಸ್ಥಾನಗಳನ್ನು ಗೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News