30 ದಿನಗಳಲ್ಲಿ ಗೂಗಲ್‌ ಜಾಹೀರಾತುಗಳಿಗೆ 30 ಕೋಟಿ ರೂ. ವೆಚ್ಚ ಮಾಡಿದ ಬಿಜೆಪಿ

Update: 2024-03-04 13:15 GMT

ಹೊಸದಿಲ್ಲಿ: ಬಿಜೆಪಿಯು ಜನವರಿ 29ರಿಂದ ಫೆಬ್ರವರಿ 28ರ ನಡುವಿನ 30 ದಿನಗಳ ಅವಧಿಯಲ್ಲಿ ರೂ 29.7 ಕೋಟಿ ಮೌಲ್ಯದ 12,600 ಕ್ಕೂ ಹೆಚ್ಚು ಜಾಹೀರಾತುಗಳನ್ನು ಪ್ರದರ್ಶಿಸಿದೆ ಎಂದು ಗೂಗಲ್‌ ಆಡ್ಸ್‌ ಟ್ರಾನ್ಸ್‌ಪರೆನ್ಸಿ ಸೆಂಟರ್‌ ಡೇಟಾ ಬಹಿರಂಗಪಡಿಸಿದೆ. ಈ ಜಾಹೀರಾತುಗಳ ಪೈಕಿ ಶೇ 75ರಷ್ಟು ವೀಡಿಯೋಗಳಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಹಲವು ಯೋಜನೆಗಳ ಪ್ರಚಾರದ ಕುರಿತಾಗಿತ್ತು ಹಾಗೂ ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಸಾರಗೊಂಡಿವೆ. ಆದರೆ 2019 ಸಾರ್ವತ್ರಿಕ ಚುನಾವಣೆಗಳ ಮುಂಚಿನ ನಾಲ್ಕು ತಿಂಗಳ ಅವಧಿಯಲ್ಲಿ ಬಿಜೆಪಿಯು ಜಾಹೀರಾತುಗಳಿಗಾಗಿ ರೂ 12.3 ಕೋಟಿ ಮೊತ್ತವನ್ನಷ್ಟೇ ವ್ಯಯಿಸಿತ್ತು. ಈ ಅವಧಿಯಲ್ಲಿ ಕಾಂಗ್ರೆಸ್‌ ಪಕ್ಷ ರೂ 2.99 ಕೋಟಿ ವ್ಯಯಿಸಿತ್ತು. ಆದರೆ ಫೆಬ್ರವರಿ 2024ರಲ್ಲಿ ಕಾಂಗ್ರೆಸ್‌ ಪಕ್ಷ ಗೂಗಲ್‌ ಜಾಹೀರಾತುಗಳನ್ನು ಪ್ರದರ್ಶಿಸಿಲ್ಲ ಎಂದು thenewsminute.com ವರದಿ ಮಾಡಿದೆ.

ಬಿಜೆಪಿಯು 2019ರಿಂದೀಚೆಗೆ 52,000 ಜಾಹೀರಾತುಗಳಿಗಾಗಿ ರೂ 79.16 ಕೋಟಿ ವ್ಯಯಿಸಿದೆ ಎಂದು ಗೂಗಲ್‌ ಅಂಕಿಅಂಶಗಳು ವಿವರಿಸಿವೆ.

ಕಳೆದ ತಿಂಗಳ ಗೂಗಲ್‌ ಜಾಹೀರಾತುಗಳಲ್ಲಿ ಹೆಚ್ಚಿನ ಜಾಹೀರಾತುಗಳು ಉತ್ತರ ಭಾರತದ ರಾಜ್ಯಗಳನ್ನು, ಪ್ರಮುಖವಾಗಿ ಬಿಜೆಪಿ ಅಥವಾ ಅದರ ಮಿತ್ರಪಕ್ಷಗಳ ಸರ್ಕಾರಗಳಿರುವ ರಾಜ್ಯಗಳನ್ನು ಗುರಿಯಾಗಿಸಿತ್ತು.

ಕಳೆದ 30 ದಿನಗಳಲ್ಲಿ ಬಿಜೆಪಿಯು ರೂ. 30 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಒಂದು ಕೋಟಿ ವೀಕ್ಷಣೆಯ ಒಂದು ವೀಡಿಯೋ, ರೂ. 10 ರಿಂದ 30 ಲಕ್ಷ ವೆಚ್ಚದ 50 ವೀಡಿಯೋಗಳು, ರೂ 5 ಲಕ್ಷದಿಂದ ರೂ 10 ಲಕ್ಷ ವೆಚ್ಚದ 100 ವೀಡಿಯೋಗಳು, ರೂ 2.5 ಲಕ್ಷದಿಂದ ರೂ 5 ಲಕ್ಷ ವೆಚ್ಚದ 124 ವೀಡಿಯೋಗಳು ಹಾಗೂ ರೂ 1 ಲಕ್ಷದಿಂದ ರೂ 2.5 ಲಕ್ಷವರೆಗಿನ ವೆಚ್ಚದ 109 ವೀಡಿಯೋಗಳನ್ನು ಪ್ರದರ್ಶಿಸಿದೆ.

ಆದರೆ 2019ರಿಂದೀಚೆಗಿನ ಐದು ವರ್ಷಗಳಲ್ಲಿ ಬಿಜೆಪಿ ದಕ್ಷಿಣದ ರಾಜ್ಯಗಳಲ್ಲಿ‌ ಕರ್ನಾಟಕ ಹೊರತುಪಡಿಸಿ ಉಳಿದ ರಾಜ್ಯಗಳಲ್ಲಿ ಜಾಹೀರಾತುಗಳಿಗೆ ಕಡಿಮೆ ಖರ್ಚು ಮಾಡಿದೆ. ಕರ್ನಾಟಕದಲ್ಲಿ ಪಕ್ಷ ಕಳೆದ ಐದು ವರ್ಷಗಳಲ್ಲಿ ಜಾಹೀರಾತುಗಳಿಗೆ ಗರಿಷ್ಠ ರೂ 8.9 ಕೋಟಿ ಖರ್ಚು ಮಾಡಿದ್ದರೆ, ನಂತರದ ಸ್ಥಾನಗಳಲ್ಲಿ ಉತ್ತರ ಪ್ರದೇಶ (ರೂ 7.76 ಕೋಟಿ), ದಿಲ್ಲಿ (ರೂ 6.84 ಕೋಟಿ), ಗುಜರಾತ್‌ (ರೂ 6.1 ಕೋಟಿ), ಮಧ್ಯಪ್ರದೇಶ (ರೂ 5.9 ಕೋಟಿ), ಬಿಹಾರ (ರೂ 4.38 ಕೋಟಿ), ಪಶ್ಚಿಮ ಬಂಗಾಳ (ರೂ 3.46 ಕೋಟಿ), ತೆಲಂಗಾಣ (ರೂ 3.18 ಕೋಟಿ), ಮಹಾರಾಷ್ಟ್ರ (ರೂ 3 ಕೋಟಿ) ಮತ್ತು ಹರ್ಯಾಣ (ರೂ 2.6 ಕೋಟಿ).

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News