ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕಣ್ಮರೆಯಾಗಲಿದೆ: ರಾಹುಲ್ ಗಾಂಧಿ

Update: 2023-06-23 17:33 GMT

ಪಾಟ್ನಾ: ಕರ್ನಾಟಕದಲ್ಲಿ ಆದಂತೆ ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಡ ವಿಧಾನಸಭಾ ಚುನಾವಣೆಗಳಲ್ಲಿಯೂ ಬಿಜೆಪಿ ಕಣ್ಮರೆಯಾಗಲಿದೆ ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶುಕ್ರವಾರ ಇಲ್ಲಿ ಪ್ರತಿಪಾದಿಸಿದರು. ಪ್ರತಿಪಕ್ಷ ನಾಯಕರ ಸಭೆಗೆ ಹಾಜರಾಗಲು ಶುಕ್ರವಾರ ಬೆಳಿಗ್ಗೆ ಪಾಟ್ನಾ ತಲುಪಿದ್ದ ರಾಹುಲ್ ಬಿಹಾರ ಕಾಂಗ್ರೆಸ್ ನ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಮೊದಲು ತಾವು ಬೃಹತ್ ಗೆಲುವು ಸಾಧಿಸುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದರು. ಆದರೆ ಕಾಂಗ್ರೆಸ್ ಒಂದಾಗಿ ನಿಂತು ಚುನಾವಣೆಗಳಲ್ಲಿ ಹೋರಾಡಿದಾಗ ಬಿಜೆಪಿ ಪರಾಭವಗೊಂಡಿತ್ತು ಎಂದ ಅವರು, ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಾಮಾವಶೇಷಗೊಳ್ಳಲಿದೆ ಎಂದು ಹೇಳಿದರು.

ಕಾಂಗ್ರೆಸ್ ಬಡವರಿಗೆ ಬೆಂಬಲವಾಗಿ ನಿಂತಿದೆ, ಆದರೆ ತಮ್ಮ 2-3 ಸ್ನೇಹಿತರಿಗೆ ದೇಶದ ಆಸ್ತಿಗಳನ್ನು ವರ್ಗಾಯಿಸುವುದು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶವಾಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ ಎಂದ ರಾಹುಲ್, ದೇಶವು ‘ಭಾರತ ಜೋಡೊ’ ಸಿದ್ಧಾಂತ ಅಥವಾ ‘ಭಾರತ ತೋಡೊ ’ ಸಿದ್ಧಾಂತಗಳ ನಡುವೆ ಆಯ್ಕೆ ಮಾಡಿಕೊಳ್ಳಬೇಕಿದೆ ಎಂದರು.

ಬಿಹಾರದಲ್ಲಿ ಕಾಂಗ್ರೆಸ್ ಡಿಎನ್ಎ ಇದೆ ಎಂದ ಅವರು, ತಮಿಳುನಾಡು, ಕರ್ನಾಟಕ ಮತ್ತು ಇತರ ರಾಜ್ಯಗಳಲ್ಲಿ ತನ್ನ ಭಾರತ ಜೋಡೊ ಯಾತ್ರೆ ಸಂದರ್ಭದಲ್ಲಿ ಬಿಹಾರದ ಅನೇಕ ಜನರು ಪಾಲ್ಗೊಂಡಿದ್ದರು ಎಂದರು.

ಬಿಜೆಪಿಯು ದ್ವೇಷ ಮತ್ತು ಹಿಂಸೆಯನ್ನು ಹರಡುತ್ತಿದೆ,ಅದು ದೇಶವನ್ನು ಸಹ ವಿಭಜಿಸುತ್ತಿದೆ. ಕಾಂಗ್ರೆಸ್ ಪ್ರೀತಿಯನ್ನು ಹರಡುತ್ತಿದೆ. ದ್ವೇಷವನ್ನು ದ್ವೇಷದಿಂದ ಸೋಲಿಸಲು ಸಾಧ್ಯವಿಲ್ಲ, ಅದು ಪ್ರೀತಿಯಿಂದ ಮಾತ್ರ ಸಾಧ್ಯ ಎಂದ ಅವರು, ‘ಎಲ್ಲ ಪ್ರತಿಪಕ್ಷಗಳು ಪಾಟ್ನಾದಲ್ಲಿ ಸೇರಿವೆ ಮತ್ತು ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News