ಮರಾಠ ಅಭ್ಯರ್ಥಿಗಳನ್ನು ಇಡಬ್ಲ್ಯುಎಸ್ ಕೋಟಕ್ಕೆ ಪರಿಗಣಿಸಲು ಬಾಂಬೆ ಹೈಕೋರ್ಟ್ ಅನುಮತಿ

Update: 2023-12-23 15:20 GMT

ಬಾಂಬೆ ಹೈಕೋರ್ಟ್

ಮುಂಬೈ: 2019ರಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಎಸ್‌ಇಬಿಸಿ) ವಿಭಾಗದಲ್ಲಿ ರಾಜ್ಯ ಸರಕಾರದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಮರಾಠ ಅಭ್ಯರ್ಥಿಗಳನ್ನು ಆರ್ಥಿಕ ದುರ್ಬಲ ವರ್ಗ (ಇಡಬ್ಲ್ಯುಎಸ್)ದ ವಿಭಾಗದಲ್ಲಿ ಪರಿಗಣಿಸಲು ಮಹಾರಾಷ್ಟ್ರ ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.

ರಾಜ್ಯ ಸರಕಾರದ ನಿರ್ಧಾರವನ್ನು ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿಯು ಫೆಬ್ರವರಿಯಲ್ಲಿ ರದ್ದುಗೊಳಿಸಿತ್ತು. ನ್ಯಾಯಮಂಡಳಿಯ ಆದೇಶವನ್ನು ಶುಕ್ರವಾರ ನ್ಯಾಯಮೂರ್ತಿಗಳಾದ ನಿತಿನ್ ಜಾಮದಾರ್ ಮತ್ತು ಮಂಜೂಶಾ ದೇಶಪಾಂಡೆ ಅವರನ್ನೊಳಗೊಂಡ ವಿಭಾಗ ಪೀಠವೊಂದು ತಳ್ಳಿಹಾಕಿದೆ.

ಸಬ್ ಇನ್ಸ್‌ಪೆಕ್ಟರ್, ತೆರಿಗೆ ಸಹಾಯಕ, ಗುಮಾಸ್ತ-ಟೈಪಿಸ್ಟ್, ಅರಣ್ಯ ಇಲಾಖೆ ಮತ್ತು ಇಂಜಿನಿಯರಿಂಗ್ ಹುದ್ದೆಗಳಿಗೆ ಸಂಬಂಧಿಸಿ ನ್ಯಾಯಮಂಡಳಿಯು ನೀಡಿರುವ ತೀರ್ಪನ್ನು ಮಹಾರಾಷ್ಟ್ರ ಸರಕಾರ ಮತ್ತು ಮರಾಠ ಸಮುದಾಯದ 100ಕ್ಕೂ ಅಧಿಕ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ನ್ಯಾಯಮಂಡಳಿಯ ತೀರ್ಪು ಸ್ಥಾಪಿತ ಕಾನೂನು ತತ್ವಗಳಿಗೆ ದೂರವಾಗಿದೆ ಮತ್ತು ವಿವಿಧ ಪರಿಣಾಮಗಳಿಗೆ ಕಾರಣವಾಗಿದೆ. ಇದು ಗಣನೀಯ ಸಂಖ್ಯೆಯ ಅಭ್ಯರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಿವೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2021ರಲ್ಲಿ ಮರಾಠ ಕೋಟವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ, ಆ ಸಮಯದಲ್ಲಿ ಚಾಲ್ತಿಯಲ್ಲಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿಭಾಗದ ಅಭ್ಯರ್ಥಿಗಳನ್ನು ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳ ವಿಭಾಗದಲ್ಲಿ ಪರಿಗಣಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿತ್ತು.

ಒಟ್ಟು ಮೀಸಲಾತಿಯು 1992ರಲ್ಲಿ ತಾನು ವಿಧಿಸಿರುವ 50 ಶೇಕಡ ಮಿತಿಯನ್ನು ಮೀರುತ್ತದೆ ಎಂದು ಹೇಳಿ ಮರಾಠ ಅಭ್ಯರ್ಥಿಗಳಿಗೆ ಸರಕಾರಿ ಹುದ್ದೆಗಳಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಮಹಾರಾಷ್ಟ್ರ ಸರಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News