ಕರ್ನಾಟಕ ಸರಕಾರದ ಆಹ್ವಾನವಿದ್ದರೂ ಭಾರತಕ್ಕೆ ನನಗೆ ಪ್ರವೇಶ ನಿರಾಕರಿಸಲಾಯಿತು: ಭಾರತ ಮೂಲದ ಬ್ರಿಟಿಷ್ ಪ್ರೊಫೆಸರ್ ಆರೋಪ
ಬೆಂಗಳೂರು: "ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕೆ" ನನಗೆ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ನನ್ನನ್ನು ವಾಪಸ್ ಕಳುಹಿಸಲಾಯಿತು ಎಂದು ಭಾರತೀಯ ಮೂಲದ, ಲಂಡನ್‌ನ ವೆಸ್ಟ್‌ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಆಗಿರುವ ನಿತಾಶಾ ಕೌಲ್ ಆರೋಪಿಸಿದ್ದಾರೆ.
"ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ" ಕುರಿತು ಶನಿವಾರ ಮತ್ತು ರವಿವಾರ ಕರ್ನಾಟಕ ಸರಕಾರವು ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನಕ್ಕೆ ನಿತಾಶಾ ಕೌಲ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಮಾನ್ಯತೆ ಹೊಂದಿರುವ ವೀಸಾ ಹೊಂದಿದ್ದ ಹೊರತಾಗಿಯೂ, ಬೆಂಗಳೂರಿಗೆ ಬಂದಿಳಿದಾಗ ವಿಮಾನ ನಿಲ್ದಾಣದಿಂದ ತೆರಳಲು ಅವರಿಗೆ ಅನುಮತಿ ನಿರಾಕರಿಸಲಾಗಿದೆ.
ಕಾಶ್ಮೀರಿ ಪಂಡಿತೆಯಾಗಿರುವ ನಿತಾಶಾ ಕೌಲ್, ಆರೆಸ್ಸೆಸ್ ನ ಕಟು ಟೀಕಾಕಾರರಾಗಿದ್ದಾರೆ. ಕೌಲ್ ಸಾಗರೋತ್ತರ ಭಾರತೀಯ ಪ್ರಜೆಯೂ ಆಗಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕೌಲ್, "ನಾವು ಏನೂ ಮಾಡಲು ಸಾಧ್ಯವಿಲ್ಲ. ದಿಲ್ಲಿಯಿಂದ ಆದೇಶ ಬಂದಿದೆ ಎಂಬ ಮಾತು ಹೊರತುಪಡಿಸಿ ಬೇರಾವ ಕಾರಣವನ್ನೂ ಅಧಿಕಾರಿಗಳು ನನಗೆ ನೀಡಲಿಲ್ಲ. ನಾನು ಭಾರತ ಪ್ರವೇಶಿಸಲು ಸಾಧ್ಯವಿಲ್ಲ ಎಂಬ ಯಾವುದೇ ಪೂರ್ವಭಾವಿ ಮಾಹಿತಿ ಅಥವಾ ನೋಟಿಸ್ ಅನ್ನು ನನಗೆ ನೀಡಲಾಗಿರಲಿಲ್ಲ" ಎಂದು ಬರೆದುಕೊಂಡಿದ್ದಾರೆ.
ನಿತಾಶಾ ಕೌಲ್ ಬೆಂಗಳೂರಿಗೆ ಬಂದಿಳಿದ 24 ಗಂಟೆಯ ನಂತರ, ಬ್ರಿಟಿಷ್ ಏರ್‌ವೇಸ್ ವಿಮಾನದ ಮೂಲಕ ಅವರನ್ನು ಲಂಡನ್‌ಗೆ ವಾಪಸ್ ಕಳುಹಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿಯನ್ವಯ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ನಂತರ, ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ಕುರಿತು 2019ರಲ್ಲಿ ನಿತಾಶಾ ಕೌಲ್ ಅಮೆರಿಕಾದ ವಿದೇಶಾಂಗ ವ್ಯವಹಾರಗಳ ಸದನ ಸಮಿತಿಯೆದುರು ಸಾಕ್ಷ್ಯ ನುಡಿದಿದ್ದರು.