13 ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆ ಫಲಿತಾಂಶ: ಒಂದರಲ್ಲಿ ಗೆದ್ದು 10 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಇಂಡಿಯಾ ಮೈತ್ರಿಕೂಟ

Update: 2024-07-13 06:47 GMT

Photo: PTI

ಹೊಸದಿಲ್ಲಿ: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಗಳ ಎಣಿಕೆ ಆರಂಭವಾಗಿದೆ. ಲೋಕಸಭಾ ಚುನಾವಣೆ ನಡೆದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮುನ್ನಡೆ ಸಾಧಿಸಿವೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಠಿಣ ಪೈಪೋಟಿ ನೀಡಿದ್ದ ಇಂಡಿಯಾ ಮೈತ್ರಿಕೂಟ ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಜಲಂಧರ್ ಸ್ಥಾನವನ್ನು‌ ಇಂಡಿಯಾ ಮೈತ್ರಿಕೂಟದ ಆಪ್ ಪಕ್ಷ ಗೆದ್ದಿದೆ ಮತ್ತು ಇತರ 10 ಸ್ಥಾನಗಳಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ.

ಪಂಜಾಬ್‌ನ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಪ್‌ನ ಮೊಹಿಂದರ್ ಭಗತ್ ಅವರು  23,000 ಮತಗಳಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಪ್ರತಿ ಕ್ಷೇತ್ರದಲ್ಲಿ ಬಿಜೆಪಿ ಹಿಂದುಳಿದಿದೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಎರಡು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಹಮೀರ್‌ಪುರದಲ್ಲಿ ಬಿಜೆಪಿಯ ಆಶಿಶ್ ಶರ್ಮಾ ಮುನ್ನಡೆ ಸಾಧಿಸಿದ್ದಾರೆ. ಉತ್ತರಾಖಂಡದ ಬದರಿನಾಥ್ ಮತ್ತು ಮಂಗಳೌರ್ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.

ಮಧ್ಯಪ್ರದೇಶದ ಅಮರವಾರ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಧೀರನ್ ಶಾ 4,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಹಾರದ ರುಪೌಲಿ ಕ್ಷೇತ್ರದಲ್ಲಿ ಜೆಡಿಯುನ ಕಲಾಧರ್ ಪ್ರಸಾದ್ ಮಂಡಲ್ ಮುನ್ನಡೆ ಸಾಧಿಸಿದ್ದಾರೆ ಮತ್ತು ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ಡಿಎಂಕೆಯ ಅಣ್ಣಿಯುರ್ ಶಿವ 10,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News