ವಾಹನಗಳು ಜಾತಿ ಮತ್ತು ಧಾರ್ಮಿಕ ಸ್ಟಿಕರ್‌ಗಳನ್ನು ಹೊಂದಿರಬಹುದೇ?; ಕಾನೂನು ಏನು ಹೇಳುತ್ತದೆ?

Update: 2023-08-23 14:12 GMT

ಹೊಸದಿಲ್ಲಿ: ನೊಯ್ಡಾ ಮತ್ತು ಗಾಜಿಯಾಬಾದ್ ಪೊಲೀಸರು ಆ.11ರಿಂದ ಆರಂಭಿಸಿರುವ ವಿಶೇಷ ಅಭಿಯಾನದ ಅಂಗವಾಗಿ ಕಳೆದ ಕೆಲವು ದಿನಗಳಲ್ಲಿ ತಮ್ಮ ಕಾರುಗಳ ಮೇಲೆ ಜಾತಿ ಮತ್ತು ಧಾರ್ಮಿಕ ಸ್ಟಿಕರ್‌ಗಳನ್ನು ಅಂಟಿಸಿದ್ದಕ್ಕಾಗಿ 2,300 ಜನರಿಗೆ ದಂಡ ವಿಧಿಸಿದ್ದಾರೆ.

ದಂಡದ ಮೊತ್ತವು ಇಂತಹ ಸ್ಟಿಕರ್‌ನ್ನು ಕಾರಿನ ಮೇಲೆ ಅಂಟಿಸಿದ್ದರೆ 1,000 ರೂ.ಮತ್ತು ನಂಬರ್ ಪ್ಲೇಟ್ ಮೇಲೆ ಅಂಟಿಸಿದರೆ 5,000 ರೂ.ಆಗಿದೆ.

ಭವಿಷ್ಯದಲ್ಲಿಯೂ ಇಂತಹ ಅಭಿಯಾನಗಳನ್ನು ನಡೆಸಲಾಗುವುದು ಎಂದು ಪೋಲಿಸರು ಹೇಳಿದ್ದಾರೆ.

ಕಾನೂನು ಏನು ಹೇಳುತ್ತದೆ?

ಮೋಟರ್ ವಾಹನ ನಿಯಮಗಳು 1989ರಡಿ ನಂಬರ್ ಪ್ಲೇಟ್ ಮೇಲೆ ಯಾವುದೇ ಸ್ಟಿಕರ್ ಅಂಟಿಸದಂತೆ ಸ್ಪಷ್ಟ ನಿಯಮವಿದೆಯಾದರೂ ವಿವಿಧ ರಾಜ್ಯ ಸರಕಾರಗಳು ಕಾರಿನ ಮೈಮೇಲೂ ಜಾತಿ ಮತ್ತು ಧರ್ಮವನ್ನು ಸೂಚಿಸುವ ಸ್ಟಿಕರ್‌ಗಳನ್ನು ಅಂಟಿಸುವುದರ ವಿರುದ್ಧ ಆದೇಶಗಳನ್ನು ಹೊರಡಿಸಿವೆ.

ಮೋಟರ್ ವಾಹನ ನಿಯಮಗಳ ಪ್ರಕಾರ ನಂಬರ್ ಪ್ಲೇಟ್‌ಗಳಲ್ಲಿ ‘ಸ್ಟಿಕರ್‌ಗಳು ಮತ್ತು ಅಂಟಿಕೊಳ್ಳುವ ಲೇಬಲ್ ’ಗಳಿಗೆ ಅನುಮತಿಯಿಲ್ಲ.

ನಿಯಮಗಳು ನಂಬರ್ ಪ್ಲೇಟ್‌ನ ನಿರ್ದಿಷ್ಟ ಲಕ್ಷಣಗಳನ್ನೂ ಸ್ಪಷ್ಟಪಡಿಸಿವೆ. ನಂಬರ್ ಪ್ಲೇಟ್ 1.0 ಎಂ.ಎಂ.ಅಲ್ಯುಮಿನಿಯಮ್‌ನಿಂದ ಮಾಡಲಾದ ಘನ ಘಟಕವಾಗಿರಬೇಕು ಮತ್ತು ಅತ್ಯಂತ ಎಡಭಾಗದ ಮಧ್ಯದಲ್ಲಿ ನೀಲಿ ಬಣ್ಣದಲ್ಲಿ ‘IND’ ಅಕ್ಷರಗಳನ್ನು ಹೊಂದಿರಬೇಕು.

ಲೇಬಲ್‌ಗಳು ಮತ್ತು ಸ್ಟಿಕರ್‌ಗಳನ್ನು ಅಂಟಿಸುವುದು ಸೇರಿದಂತೆ ನಂಬರ್ ಪ್ಲೇಟ್ ನಿಯಮಗಳಿಗೆ ಅನುಗುಣವಾಗಿಲ್ಲದಿದ್ದರೆ ಮೋಟರ್ ವಾಹನ ಕಾಯ್ದೆಯ ಕಲಂ 192ರಲ್ಲಿ ಇಂತಹ ಮೊದಲ ಅಪರಾಧಕ್ಕೆ 5,000 ರೂ.ವರೆಗೆ ದಂಡ ವಿಧಿಸಲು ಅವಕಾಶವಿದೆ. ಅಪರಾಧವನ್ನು ಪುನರಾವರ್ತಿಸಿದರೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ವರೆಗೆ ದಂಡವನ್ನು ವಿಧಿಸಲಾಗುತ್ತದೆ.

ವಾಹನಗಳ ಮೈಮೇಲೆ ಸ್ಟಿಕರ್‌ಗಳ ಸಂದರ್ಭದಲ್ಲಿ ಪೊಲೀಸರು ಮೋಟರ್ ವಾಹನ ಕಾಯ್ದೆ 1988ರ ಕಲಂ 179ರಡಿ ದಂಡ ವಿಧಿಸುತ್ತಿದ್ದಾರೆ. ‘ಆದೇಶಗಳ ಉಲ್ಲಂಘನೆ,ಅಡಚಣೆ ಮತ್ತು ಮಾಹಿತಿ ನಿರಾಕರಣೆ ’ ಪ್ರಕರಣಗಳಲ್ಲಿ ದಂಡ ವಿಧಿಸಲು ಈ ಕಲಮ್‌ನಲ್ಲಿ ಅವಕಾಶವಿದೆ.

ಈ ಕಾಯ್ದೆಯಡಿ ಯಾವುದೇ ಸಕ್ಷಮ ವ್ಯಕ್ತಿ ಅಥವಾ ಪ್ರಾಧಿಕಾರ ಕಾನೂನುಬದ್ಧವಾಗಿ ಹೊರಡಿಸಿರುವ ಯಾವುದೇ ನಿರ್ದೇಶನವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವವರಿಗೆ ಅಥವಾ ವ್ಯಕ್ತಿ ಅಥವಾ ಪ್ರಾಧಿಕಾರದ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡುವವರಿಗೆ, ಶಿಕ್ಷಾರ್ಹ ಅಪರಾಧಕ್ಕೆ ಇತರ ಯಾವುದೇ ದಂಡವನ್ನು ಸೂಚಿಸಿರದಿದ್ದರೆ, 500 ರೂ.ವರೆಗೆ ದಂಡವನ್ನು ವಿಧಿಸಬಹುದಾಗಿದೆ ಎಂದು ಕಲಂ ಹೇಳುತ್ತದೆ.

ಮೊದಲು (ಕಾಯ್ದೆಯಲ್ಲಿ ಅಪರಾಧಕ್ಕೆ ದಂಡವನ್ನು ಸೂಚಿಸಿರದಿದ್ದರೆ) 500 ರೂ.ವರೆಗೆ ದಂಡಗಳನ್ನು ವಿಧಿಸಲಾಗುತ್ತಿತ್ತು. ಆದರೆ ಮೋಟರ್ ವಾಹನ ಕಾಯ್ದೆಗೆ 2019ರ ತಿದ್ದುಪಡಿಯ ಬಳಿಕ ಈಗ 2,000 ರೂ.ವರೆಗೆ ದಂಡ ವಿಧಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News