ಮಲಯಾಳಂ ಸಿನಿಮಾದ ನಕಾರಾತ್ಮಕ ವಿಮರ್ಶೆಗಾಗಿ ಚಿತ್ರ ವಿಮರ್ಶಕರು, ಸಾಮಾಜಿಕ ಮಾಧ್ಯಮಗಳ ವಿರುದ್ಧ ಪ್ರಕರಣ

Update: 2023-10-26 15:19 GMT

Photo: Canva

ತಿರುವನಂತಪುರ: ಕೇರಳ ಪೋಲಿಸರು ಚಲನಚಿತ್ರ ನಿರ್ದೇಶಕರೋರ್ವರ ದೂರಿನ ಮೇರೆಗೆ ಆನ್‌ಲೈನ್ ಚಿತ್ರ ವಿಮರ್ಶಕರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ಅ.13ರಂದು ಸಿನಿಮಾ ಬಿಡುಗಡೆಯಾದ ಬೆನ್ನಿಗೇ ಆರೋಪಿಗಳು ಅದರ ಕುರಿತು ನಕಾರಾತ್ಮಕ ವಿಮರ್ಶೆಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅದನ್ನು ಗುರಿಯಾಗಿಸಿಕೊಂಡಿದ್ದರು ಎಂದು ಮಲಯಾಳಂ ಚಲನಚಿತ್ರ ‘ರಾಹೆಲ್ ಮಕನ್ ಕೋರಾ’ದ ನಿರ್ದೇಶಕ ಉಬಾನಿ ಈ ದೂರಿನಲ್ಲಿ ಹೇಳಿದ್ದಾರೆ.

ಸುಲಿಗೆಯ ಮತ್ತು ತನಗೆ ಅಪಖ್ಯಾತಿಯನ್ನು ತರುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ ಎಂದು ಹೇಳಿರುವ ಉಬಾನಿ, ಆರೋಪಿಗಳಲ್ಲೋರ್ವ ಆತನ ವಿರುದ್ಧ ಕಾನೂನು ಕ್ರಮವನ್ನು ಕೈಗೊಂಡರೆ ಚಿತ್ರಕ್ಕೆ ಇನ್ನಷ್ಟು ಹಾನಿಯನ್ನುಂಟು ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದೂ ಆರೋಪಿಸಿದ್ದಾರೆ.

ಮಾಧ್ಯಮ ವರದಿಗಳಂತೆ ಆರೋಪಿಗಳಲ್ಲಿ ಓರ್ವರಾಗಿರುವ ಹೇನ್ಸ್ ಸ್ನೇಕ್ ಪ್ಲಾಂಟ್ ಸಿನಿಮಾ ಪ್ರಚಾರ ಕಂಪನಿಯ ಮಾಲಿಕರಾಗಿದ್ದಾರೆ. ಪ್ರಕರಣ ದಾಖಲಾಗಿರುವ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಯೂ ಟ್ಯೂಬ್ ಮತ್ತು ಫೇಸ್‌ಬುಕ್ ಕೂಡ ಸೇರಿವೆ ಎನ್ನಲಾಗಿದೆ.

ಆನ್‌ಲೈನ್ ವೇದಿಕೆಗಳ ಮೇಲೆ ನಿಗಾ:

ಅನಾಮಧೇಯ ಮತ್ತು ದುರುದ್ದೇಶಪೂರಿತ ಚಲನಚಿತ್ರ ವಿಮರ್ಶೆಗಳನ್ನು ಪೋಸ್ಟ್ ಮಾಡಲಾಗುವುದಿಲ್ಲ ಅಥವಾ ಪ್ರಸಾರ ಮಾಡಲಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಆನ್‌ಲೈನ್ ವೇದಿಕೆಗಳ ಮೇಲೆ ನಿಕಟ ನಿಗಾಯಿರಿಸುವಂತೆ ಕೇರಳ ಹೈ ಕೋರ್ಟ್ ಸೂಚಿಸಿರುವ ದಿನವೇ ಈ ಬೆಳವಣಿಗೆ ನಡೆದಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ನಿಬಂಧನೆಗಳಡಿ ಇಂತಹ ವಿಷಯಗಳ ವಿರುದ್ಧ ಕ್ರಮವನ್ನು ಕೈಗೊಳ್ಳುವಂತೆ ನ್ಯಾ.ದೇವನ್ ರಾಮಚಂದ್ರನ್ ಅವರ ಪೀಠವು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಸಾಮಾಜಿಕ ಮಾಧ್ಯಮ ಪ್ರಭಾವಿಗಳು ಮತ್ತು ಚಿತ್ರ ವಿಮರ್ಶಕ ವಿ ಲಾಗರ್‌ಗಳು ಚಲನಚಿತ್ರವೊಂದು ಬಿಡುಗಡೆಗೊಂಡ ಬಳಿಕ ಕನಿಷ್ಠ ಏಳು ದಿನಗಳ ಕಾಲ ಯಾವುದೇ ವಿಮರ್ಶೆಯನ್ನು ಪ್ರಕಟಿಸದಂತೆ ನಿರ್ಬಂಧ ಹೇರುವಂತೆ ಕೋರಿ ‘ಅರೋಮಲಿಂಟೆ ಆದ್ಯತ್ತೆ ಪ್ರಣಯಂ’ ಸಿನಿಮಾದ ನಿರ್ದೇಶಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಅದು ನಿರ್ಮಾಪಕರ ಸಂಘವು ಸಲ್ಲಿಸಿರುವ ಇನ್ನೊಂದು ಅರ್ಜಿಯ ವಿಚಾರಣೆಯನ್ನೂ ನಡೆಸುತ್ತಿದೆ.

‘ಇದೊಂದು ಹೊಸ ಜಗತ್ತು. ನಾವು ಬೆಳೆದ ಜಗತ್ತು ಬೇರೆಯದೇ ಆಗಿತ್ತು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅಪರಾಧವನ್ನು ಸಮರ್ಥಿಸಲು ಬಳಸಕೂಡದು. ಮೂಲಭೂತ ಹಕ್ಕುಗಳ ನೆಪದಲ್ಲಿ ಅಪರಾಧವನ್ನು ನಾವು ಮುಚ್ಚಿ ಹಾಕುತ್ತಿಲ್ಲ. ನೀವು ಹೋಟೆಲ್‌ಗೆ ಹೋಗಿದ್ದೀರಿ ಮತ್ತು ಅಲ್ಲಿಯ ಆಹಾರವನ್ನು ಮೆಚ್ಚಲಿಲ್ಲ ಎಂದಿಟ್ಟುಕೊಳ್ಳೋಣ,ನಿಮ್ಮ ಅಭಿಪ್ರಾಯ ನಿಮ್ಮ ಹಕ್ಕು,ಆದರೆ ಅದನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸುವಂತಿಲ್ಲ’ಎಂದು ನ್ಯಾ.ರಾಮಚಂದ್ರನ್ ವಿಚಾರಣೆ ಸಂದರ್ಭದಲ್ಲಿ ಹೇಳಿದರು.

ಈ ನಡುವೆ ಕೇರಳ ಪೋಲಿಸರು ‘ಪ್ರೇರಿತ,ದುರುದ್ದೇಶಪೂರಿತ,ನಕಾರಾತ್ಮಕ ವಿಮರ್ಶೆಗಳು ’ ಮತ್ತು ‘ವಿಮರ್ಶಾ ಬಾಂಬ್ ದಾಳಿಗಳನ್ನು ’ ತಡೆಯಲು ರೂಪಿಸಿರುವ ಶಿಷ್ಟಾಚಾರಗಳನ್ನು ಸಲ್ಲಿಸಿದ್ದು,ಇದೊಂದು ಸ್ವಾಗತಾರ್ಹ ಹೆಜ್ಜೆ ಎಂದು ನ್ಯಾಯಾಲಯವು ಬಣ್ಣಿಸಿತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News