ದುರ್ಬಲ ಮುಂಗಾರಿನಿಂದಾಗಿ ಬಿಳಿಗುಂಡ್ಲುವಿನಲ್ಲಿ ಕಾವೇರಿ ಹರಿವು ಕಡಿಮೆಯಾಗಿದೆ : ಕಾವೇರಿ ಜಲ ನಿಯಂತ್ರಣ ಸಮಿತಿ
ಹೊಸದಿಲ್ಲಿ : ಕರ್ನಾಟಕದಿಂದ ತಮಿಳುನಾಡಿನ ಬಿಳಿಗುಂಡ್ಲುವಿಗೆ ಹರಿಯುತ್ತಿರುವ ಕಾವೇರಿ ನೀರಿನ ಪ್ರಮಾಣದ ಬಗ್ಗೆ ಕಾವೇರಿ ಜಲ ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ)ಯು ತೃಪ್ತಿಯನ್ನು ವ್ಯಕ್ತಪಡಿಸಿದೆ. ಆದರೂ ಮುಂಗಾರು ಮಳೆ ದುರ್ಬಲಗೊಂಡಿರುವುದರಿಂದ ಕಳೆದೊಂದು ವಾರದಿಂದ ನಿಗದಿತ ನೀರಿನ ಹರಿವು ದಿನಕ್ಕೆ 1.5 ಟಿಎಂಸಿಯಿಂದ 0.5 ಟಿಎಂಸಿಗೆ ಇಳಿದಿದೆ ಮತ್ತು ಇದರಿಂದಾಗಿ ಮೆಟ್ಟೂರು ಜಲಾಶಯದಲ್ಲಿ ನೀರು ಪೂರ್ಣ ಮಟ್ಟದಿಂದ ಕೊಂಚ ಕೆಳಗಿಳಿದಿದೆ ಎಂದು ಅದು ಹೇಳಿದೆ. ಪ್ರಸ್ತುತ ಮೆಟ್ಟೂರು ಜಲಾಶಯದಲ್ಲಿ ನೀರಿನ ಪ್ರಮಾಣ 93 ಟಿಎಂಸಿಗಳ ಪೂರ್ಣ ಮಟ್ಟದಿಂದ 89 ಟಿಎಂಸಿ ಮಟ್ಟಕ್ಕೆ ತಗ್ಗಿದೆ.
ಈ ವರ್ಷದ ಜೂ.1 ಮತ್ತು ಆ.29ರ ನಡುವೆ ಕರ್ನಾಟಕವು ಅಂತರರಾಜ್ಯ ಬಿಂದು ಬಿಳಿಗುಂಡ್ಲುವಿಗೆ ಸುಮಾರು 177 ಟಿಎಂಸಿಗಳಷ್ಟು ಕಾವೇರಿ ನೀರನ್ನು ಹರಿಸಿದೆ ಮತ್ತು ಇದು ಇಡೀ ಮುಂಗಾರು ಋತುವಿನ ಅಗತ್ಯ 123 ಟಿಎಂಸಿಗಳಿಗಿಂತ ಹೆಚ್ಚಿದೆ ಎಂದು ಸಿಡಬ್ಲ್ಯುಆರ್‌ಸಿ ತನ್ನ ಮೌಲ್ಯಮಾಪನದಲ್ಲಿ ನಿರ್ಣಯಿಸಿದೆ.
ಮುಂದಿನ 8-10 ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ ಎಂದು ಸಿಡಬ್ಲ್ಯುಆರ್‌ಸಿ ಅಧ್ಯಕ್ಷ ವಿನೀತ ಗುಪ್ತಾ ಸುದ್ದಿಸಂಸ್ಥೆಗೆ ತಿಳಿಸಿದರು.
ಬಿಳಿಗುಂಡ್ಲುವಿನಲ್ಲಿ ನೀರಿನ ಹರಿವು ಕಡಿಮೆಯಾಗಿರುವದಕ್ಕೆ ಪ್ರತಿಕ್ರಿಯಿಸಿರುವ ತಮಿಳುನಾಡು ಅಧಿಕಾರಿಗಳು,ತನ್ನ ಜಲಾಶಯಗಳು ಭರ್ತಿಯಾದಾಗ ಮಾತ್ರ ಕರ್ನಾಟಕವು ನೀರು ಬಿಡುಗಡೆ ಮಾಡುತ್ತದೆ ಎಂದು ಹೇಳಿದ್ದಾರೆ.