ಕರ್ನಾಟಕದಿಂದ ಕಾವೇರಿ ನದಿ ನೀರು ಕೋರಿ ತಮಿಳುನಾಡು ವಿಧಾನ ಸಭೆ ನಿರ್ಣಯ ಅಂಗೀಕಾರ
ಚೆನ್ನೈ: ಸುಪ್ರೀಂ ಕೋರ್ಟ್ ನ ನಿರ್ದೇಶನದಂತೆ ರಾಜ್ಯಕ್ಕೆ ಕಾವೇರಿ ನದಿ ನೀರು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ತಮಿಳುನಾಡು ವಿಧಾನ ಸಭೆ ಸೋಮವಾರ ನಿರ್ಣಯ ಅಂಗೀಕರಿಸಿದೆ.
ಈ ವಿಷಯದ ಕುರಿತು ಬಿಜೆಪಿ ಸಭಾ ತ್ಯಾಗ ಮಾಡಿದ ಬಳಿಕ ಸ್ಪೀಕರ್ ಎಂ. ಅಪ್ಪಾವು ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ ಎಂದು ಘೋಷಿಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿರ್ಣಯ ಮಂಡಿಸಿದರು. ಕರ್ನಾಟಕ ಕೃತಕ ಅಭಾವ ಸೃಷ್ಟಿಸಿದೆ. ಅದು ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಕಾವೇರಿ ನದಿಯಿಂದ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿದರು.
ಪ್ರತಿಪಕ್ಷದ ನಾಯಕ ಇಡಪಳ್ಳಿ ಕೆ. ಪಳನಿಸ್ವಾಮಿ ಹಾಗೂ ಸ್ಟಾಲಿನ್ ನೇತೃತ್ವದ ಆಡಳಿತ ಪಕ್ಷಗಳ ನಡುವೆ ತೀವ್ರ ಚರ್ಚೆ ನಡೆದ ಬಳಿಕ ನಿರ್ಣಯ ಅಂಗೀಕರಿಸಲಾಯಿತು. ಆದರೆ, ಎಐಎಡಿಎಂಕೆ ನಿರ್ಣಯವನ್ನು ಬೆಂಬಲಿಸಿತು.
ತಮಿಳುನಾಡು ಹಾಗೂ ಕರ್ನಾಟಕದ ನಡುವಿನ ಕಾವೇರಿ ನದಿ ನೀರು ವಿವಾದದ ಕುರಿತು ಎಐಎಂಡಿಎಂಕೆ ಆಡಳಿತಾವಧಿಯಲ್ಲಿ ತೆಗೆದುಕೊಂಡ ವಿವಿಧ ಕ್ರಮಗಳನ್ನು ಪಳನಿಸ್ವಾಮಿ ನೆನಪಿಸಿಕೊಂಡರು. ಅಲ್ಲದೆ, ಈ ವಿಷಯದ ಕುರಿತಂತೆ ಕೇಂದ್ರ ಸರಕಾರದ ಮೇಲೆ ತೀವ್ರ ಒತ್ತಡ ಹೇರಬೇಕು ಎಂದು ಅವರು ಹೇಳಿದರು. ಕೆಲವು ವರ್ಷಗಳ ಹಿಂದೆ ಈ ವಿಷಯದ ಕುರಿತಂತೆ ಸಂಸತ್ ಕಲಾಪವನ್ನು ತನ್ನ ಪಕ್ಷ ಸ್ಥಗಿತಗೊಳಿಸಿರುವುದನ್ನು ಅವರು ನೆನಪಿಸಿಕೊಂಡರು.
ಈ ನಿರ್ಣಯ ಕಾವೇರಿ ನದಿ ನೀರು ವಿವಾದಕ್ಕೆ ಸಂಪೂರ್ಣ ಪರಿಹಾರ ನೀಡುವ ಗುರಿಯನ್ನು ಹೊಂದಿದಂತೆ ಕಾಣುತ್ತಿಲ್ಲ. ಅಲ್ಲದೆ, ನಿರ್ಣಯಕ್ಕೆ ಸಂಬಂಧಿಸಿ ತಾನು ಪ್ರಸ್ತಾವಿಸಿದ ತಿದ್ದುಪಡಿಗಳ ಬಗ್ಗೆ ಸರಕಾರ ಯಾವುದೇ ಭರವಸೆ ನೀಡಿಲ್ಲ ಎಂದು ಪ್ರತಿಪಾದಿಸಿದ ಬಳಿಕ ಬಿಜೆಪಿ ಸಭಾ ತ್ಯಾಗ ಮಾಡಿತು.
ತಿದ್ದುಪಡಿ ನದಿಗಳ ರಾಷ್ಟ್ರೀಕರಣ ಹಾಗೂ ಕೇಂದ್ರ ಸರಕಾರದ ಅಣೆಕಟ್ಟು ಸುರಕ್ಷೆ ಮಸೂದೆಗೆ ಬೆಂಬಲವನ್ನು ಕೂಡ ಒಳಗೊಂಡಿದೆ.