ರೈಲು ನಿಲ್ದಾಣಗಳಲ್ಲಿ ಮೋದಿ ಚಿತ್ರವಿರುವ ಸೆಲ್ಫಿ ಬೂತ್‌ಗಳ ನಿರ್ಮಾಣಕ್ಕೆ 1.62 ಕೋಟಿ ರೂ. ಖರ್ಚು ಮಾಡಲಿರುವ ಕೇಂದ್ರ ಸರಕಾರ

Update: 2023-12-27 08:41 GMT

Photo: X/@Central_Railway

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರಗಳನ್ನು ಹೊಂದಿರುವ ಸೆಲ್ಫಿ ಬೂತ್‌ಗಳನ್ನು ರೈಲು ನಿಲ್ದಾಣಗಳಲ್ಲಿ ಸ್ಥಾಪಿಸಲು ಸೆಂಟ್ರಲ್ ರೈಲ್ವೆ 1.62 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಮಂಗಳವಾರ ʼದಿ ಹಿಂದೂʼ ವರದಿ ಮಾಡಿದೆ.

ಮೋದಿ ಅವರ ಚಿತ್ರವಿರುವ ಪ್ರತಿ 3D ಸೆಲ್ಫಿ ಬೂತ್‌ಗೆ 6.25 ಲಕ್ಷ ರೂಪಾಯಿ ಮತ್ತು ಪ್ರತಿ ತಾತ್ಕಾಲಿಕ ಬೂತ್‌ಗೆ 1.25 ಲಕ್ಷ ರೂಪಾಯಿ ವೆಚ್ಚ ಮಾಡಲು ಕೇಂದ್ರ ಅನುಮೋದನೆ ನೀಡಿದೆ ಎಂದು RTI ಮಾಹಿತಿಯನ್ನಾಧರಿಸಿ ವರದಿ ಹೇಳಿದೆ.

ಮುಂಬೈ, ಭೂಸಾವಲ್, ನಾಗ್ಪುರ, ಪುಣೆ ಮತ್ತು ಸೊಲ್ಲಾಪುರದ ಐದು ವಿಭಾಗಗಳ 50 ರೈಲು ನಿಲ್ದಾಣಗಳಲ್ಲಿ ಮೋದಿ ಚಿತ್ರವನ್ನು ಒಳಗೊಂಡ ಸೆಲ್ಫಿ ಬೂತ್‌ಗಳನ್ನು ಸೆಂಟ್ರಲ್ ರೈಲ್ವೆ ಸ್ಥಾಪಿಸಿದೆ.

ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, ಕಲ್ಯಾಣ್, ನಾಗ್ಪುರ ಮತ್ತು ಬೇತುಲ್ ಸೇರಿದಂತೆ 30 ಕೆಟಗರಿ ಎ ಸ್ಟೇಷನ್‌ಗಳಲ್ಲಿ ತಾತ್ಕಾಲಿಕ ಬೂತ್ ಗಳನ್ನು ಸ್ಥಾಪಿಸಿದರೆ, ಕರ್ಜತ್, ಕಾಸರ, ಲಾತೂರ್ ಮತ್ತು ಕೋಪರ್‌ಗಾಂವ್ ಸೇರಿದಂತೆ 20 ಕೆಟಗರಿ ಸಿ ನಿಲ್ದಾಣಗಳಲ್ಲಿ ಶಾಶ್ವತ ಬೂತ್ ಗಳನ್ನು ಸ್ಥಾಪಿಸಲಾಗಿದೆ.

ನಿವೃತ್ತ ರೈಲ್ವೆ ಅಧಿಕಾರಿ ಅಜಯ್ ಬೋಸ್ ಅವರು ಮಾಹಿತಿ ಹಕ್ಕು ಪ್ರಶ್ನೆಯನ್ನು ಸಲ್ಲಿಸಿದ್ದು, ಉತ್ತರ, ದಕ್ಷಿಣ ಮತ್ತು ಪಶ್ಚಿಮ ರೈಲ್ವೆಗಳು ಸೆಲ್ಫಿ ಪಾಯಿಂಟ್‌ಗಳ ಒಟ್ಟು ವೆಚ್ಚವನ್ನು ಬಹಿರಂಗಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಆದಾಗ್ಯೂ, ಬೋಸ್ ಅವರ ಪ್ರಶ್ನೆಗೆ ಉತ್ತರಿಸಿದ ಸೆಂಟ್ರಲ್ ರೈಲ್ವೆಯು, ಸುಮಾರು 100 ಸ್ಥಳಗಳಲ್ಲಿ ಮೋದಿ ಸೆಲ್ಫಿ ಬೂತ್‌ಗಳನ್ನು ಸ್ಥಾಪಿಸುವುದಾಗಿ ಹೇಳಿದೆ ಎಂದು ʼದಿ ಹಿಂದೂʼ ವರದಿ ಮಾಡಿದೆ.

ಡೆಹ್ರಾಡೂನ್, ಅಂಬಾಲಾ, ನವದೆಹಲಿ, ಅಮೃತಸರ, ಅಯೋಧ್ಯೆ ಮತ್ತು ಚಂಡೀಗಢದ ರೈಲು ನಿಲ್ದಾಣಗಳು ತಲಾ ಮೂರು ಸೆಲ್ಫಿ ಬೂತ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News