ಕಾಂಗ್ರೆಸ್ ವಿಶ್ವಾಸದ್ರೋಹ ಮಾಡಿದೆ: 20 ದಿನಗಳ ಬಳಿಕ ಕಾಣಿಸಿಕೊಂಡ ಸೂರತ್ ಅಭ್ಯರ್ಥಿ
ಸೂರತ್: ಕಾಂಗ್ರೆಸ್ ಪಕ್ಷ 2017ರಲ್ಲೇ ನನಗೆ ವಿಶ್ವಾಸದ್ರೋಹ ಮಾಡಿತ್ತು ಎಂದು ಕಾಂಗ್ರೆಸ್‍ನಿಂದ ಉಚ್ಚಾಟನೆಗೊಂಡಿರುವ ನೀಲೇಶ್ ಕುಂಭಾನಿ ಪ್ರತಿಕ್ರಿಯಿಸಿದ್ದಾರೆ. ಸೂರತ್‍ನಲ್ಲಿ ಇವರ ನಾಮಪತ್ರ ತಿರಸ್ಕೃತವಾದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಈ ಪ್ರಹಸನದ ಬಳಿಕ 20 ದಿನಗಳಿಂದ ನಾಪತ್ತೆಯಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಮೊದಲ ಬಾರಿಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಕ್ತಿಸಿಂಗ್ ಗೋಹಿಲ್ ಮತ್ತು ಪಕ್ಷದ ರಾಜಕೋಟ್ ಲೋಕಸಭಾ ಅಭ್ಯರ್ಥಿ ಪರೇಶ್ ಧನಾನಿ ಅವರ ಬಗೆಗಿನ ಗೌರವದಿಂದಾಗಿ ಇಷ್ಟು ದಿನ ಮೌನವಾಗಿ ಇದ್ದಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
"ಕಾಂಗ್ರೆಸ್ ಮುಖಂಡರು ನನ್ನ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿದ್ದಾರೆ. ಆದರೆ 2017ರಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುಣಾವಣೆ ವೇಳೆ ನನಗೆ ವಿಶ್ವಾಸದ್ರೋಹ ಮಾಡಿತ್ತು. ಕೆಮ್ರಾಜ್ ಕ್ಷೇತ್ರದಿಂದ ಟಿಕೆಟ್ ಅನ್ನು ಕೊನೆಯ ಕ್ಷಣದಲ್ಲಿ ರದ್ದು ಮಾಡಿತ್ತು. ಮೊದಲ ತಪ್ಪು ಮಾಡಿದ್ದು ಕಾಂಗ್ರೆಸ್" ಎಂದು ಅವರು ಹೇಳಿದ್ದಾರೆ.