ಪ್ರಧಾನಿ ಮೋದಿ,‌ ಅನುರಾಗ್ ಠಾಕೂರ್ ಅವರು ಸಂಸತ್ತಿನಲ್ಲಿ ನೀಡಿರುವ ʼತಪ್ಪು ಮತ್ತು ದಾರಿ ತಪ್ಪಿಸುವʼ ಹೇಳಿಕೆಗಳನ್ನು ಉಲ್ಲೇಖಿಸಿ ಸ್ಪೀಕರ್‌ಗೆ ಕಾಂಗ್ರೆಸ್ ಪತ್ರ

Update: 2024-07-04 11:56 GMT

ಪ್ರಧಾನಿ ನರೇಂದ್ರ ಮೋದಿ / ಅನುರಾಗ್ ಠಾಕೂರ್ (Photo: PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಸದನದಲ್ಲಿ ತಮ್ಮ ಭಾಷಣಗಳ ಸಂದರ್ಭ ತಪ್ಪು ಮತ್ತು ದಾರಿ ತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದೆ.

ನಿರ್ದೇಶನ 115(1)ರ ನಿಬಂಧನೆಗಳನ್ನು ಅನ್ವಯಿಸುವಂತೆ ಸ್ಪೀಕರ್‌ಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿರುವ ಕಾಂಗ್ರೆಸ್ ಸಂಸದ ಮಾಣಿಕಂ ಟಾಗೋರ್ ಅವರು, ಅಗತ್ಯ ಪ್ರಕ್ರಿಯೆಯನ್ನು ಆರಂಭಿಸುವಂತೆ ಮತ್ತು ಈ ನಿಟ್ಟಿನಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಮಹಿಳೆಯರಿಗೆ ಪ್ರತಿ ತಿಂಗಳು 8,500 ರೂ.ಗಳನ್ನು ಕೊಡುವ ಸುಳ್ಳು ಭರವಸೆಯನ್ನು ಕಾಂಗ್ರೆಸ್ ನೀಡಿತ್ತು ಎಂದು ಮೋದಿ ಹೇಳಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷವು, ಅದು ಗೆಲುವು ಮತ್ತು ಸರಕಾರ ರಚನೆಯನ್ನು ಆಧರಿಸಿ ನೀಡಿದ್ದ ಭರವಸೆಯಾಗಿತ್ತು ಎಂದು ತಿಳಿಸಿದೆ.

ಕಾಂಗ್ರೆಸ್ ತಾನು ಏಕಾಂಗಿಯಾಗಿ ಸ್ಪರ್ಧಿಸಿದ್ದ 16 ರಾಜ್ಯಗಳಲ್ಲಿ ಅದರ ಮತಗಳಿಕೆ ಪ್ರಮಾಣ ಕಡಿಮೆಯಾಗಿತ್ತು ಎಂಬ ಮೋದಿಯವರ ಹೇಳಿಕೆಯು ಸತ್ಯದಿಂದ ದೂರವಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ,‌ ಕರ್ನಾಟಕ, ತೆಲಂಗಾಣ ಇತ್ಯಾದಿ ರಾಜ್ಯಗಳಲ್ಲಿ ಅದರ ಮತಗಳಿಕೆ ಪ್ರಮಾಣ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಪಕ್ಷದಲ್ಲಿ ತಿಳಿಸಿದೆ.

ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಸೇನೆಯ ಬಳಿ ಗುಂಡು ನಿರೋಧಕ ಜಾಕೆಟ್‌ಗಳಿರಲಿಲ್ಲ ಎಂಬ ಮೋದಿಯವರ ಹೇಳಿಕೆ ತೀರ ತಪ್ಪುದಾರಿಗೆ ಎಳೆಯುವಂಥದ್ದಾಗಿದೆ. ಜಾಕೆಟ್‌ಗಳ ಕೊರತೆಯಿತ್ತು, ಜಾಕೆಟ್‌ಗಳೇ ಇರಲಿಲ್ಲ ಎಂದಲ್ಲ. ಮುಂಬೈ ದಾಳಿಗಳಂತಹ ಸಂದರ್ಭಗಳಲ್ಲಿ ಪೋಲಿಸರೂ ಗುಂಡು ನಿರೋಧಕ ಜಾಕೆಟ್‌ಗಳನ್ನು ಹೊಂದಿದ್ದರು ಎಂದು ಪತ್ರದಲ್ಲಿ ತಿಳಿಸಿರುವ ಟಾಗೋರ್, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಸೇನೆಗೆ ಯುದ್ಧವಿಮಾನಗಳನ್ನು ನೀಡಿರಲಿಲ್ಲ ಎಂಬ ಪ್ರಧಾನಿ ಹೇಳಿಕೆಯೂ ದಾರಿ ತಪ್ಪಿಸುವಂಥದ್ದಾಗಿದೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರೂ ಸದನದಲ್ಲಿ ತನ್ನ ಭಾಷನದಲ್ಲಿ ಈ ಆರೋಪವನ್ನು ಮಾಡಿದ್ದರು.ಆ ವೇಳೆ ದೇಶವು ಮಿಗ್ 29,ಜಾಗ್ವಾರ್,ಮಿರಾಜ್ 2000 ಮತ್ತು ಸುಖೋಯಿ ಎಸ್‌ಯು 30 ಯುದ್ಧವಿಮಾನಗಳನ್ನು ಹೊಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News