ರೈಲಿನಲ್ಲಿ ಹೆರಿಗೆ; ನಿಗದಿತವಲ್ಲದ ನಿಲ್ದಾಣದಲ್ಲಿ ರೈಲು ನಿಲುಗಡೆ
ಹೌರಾ: ಧೀರ್ಘ ದೂರದ ರೈಲಿನಲ್ಲಿ ಬಾಂಗ್ಲಾದೇಶಿ ಮಹಿಳೆಯೊಬ್ಬರು ಹೆಣ್ಣುಮಗುವಿಗೆ ಜನ್ಮನೀಡಿದ ಹಿನ್ನೆಲೆಯಲ್ಲಿ ತಾಯಿ- ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸಾಗಿಸುವ ಸಲುವಾಗಿ ನಿಗದಿತ ನಿಲುಗಡೆ ಇಲ್ಲದ ನಿಲ್ದಾಣದಲ್ಲಿ ರೈಲು ನಿಲ್ಲಿಸಿದ ಅಪರೂಪದ ಘಟನೆ ಪಶ್ಚಿಮ ಬಂಗಾಳದ ಹೌರಾದಲ್ಲಿ ಭಾನುವಾರ ನಡೆದಿದೆ.
ಸಂಬಂಧಪಟ್ಟ ಅಧಿಕಾರಿಗಳ ಸೂಚನೆ ಮೇರೆಗೆ ಮುಂಬೈ- ಹೌರಾ ಮೇಲ್ ರೈಲಿಗೆ ಬೇಗ್ನಾನ್ ನಿಲ್ದಾಣದಲ್ಲಿ ನಿಲುಗಡೆ ನೀಡಲಾಯಿತು ಎಂದು ಆಗ್ನೇಯ ರೈಲ್ವೆ ಪ್ರಕಟಿಸಿದೆ. ರೈಲ್ವೆ ಅಧಿಕಾರಿಗಳು ಹಾಗೂ ದೈನಂದಿನ ರೈಲ್ವೆ ಪ್ರಯಾಣಿಕ ಸಂಘದ ನೆರವಿನೊಂದಿಗೆ ರೈಲು ನಿಲ್ದಾಣದಿಂದ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಬೇಗ್ನಾನ್ ನಿಲ್ದಾಣಕ್ಕೆ ರೈಲು ತಲುಪಿದ ಕೂಡಲೇ ತಾಯಿ- ಮಗುವನ್ನು ಸ್ಥಳೀಯ ನರ್ಸಿಂಗ್ ಹೋಂ ಗೆ ಕರೆದೊಯ್ಯಲಾಯಿತು ಎಂದು ಆರ್ ಪಿ ಎಫ್ ಅಧಿಕಾರಿ ಹೇಳಿದ್ದಾರೆ.
ಬಾಂಗ್ಲಾದೇಶದ ಸಾತ್ಕಿರಾ ಜಿಲ್ಲೆಯ ಮಂಝಿಲಾ ಖಾತೂನ್ ಹಾಗೂ ಅವರ ಪತಿ ರಿಝಾವುಲ್ ಗಾಝಿ ವೈದ್ಯಕೀಯ ಚಿಕಿತ್ಸೆಗಾಗಿ ಮುಂಬೈಗೆ ತೆರಳಿ ಈ ರೈಲಿನಲ್ಲಿ ವಾಪಸ್ಸಾಗುತ್ತಿದ್ದರು. ರೈಲು ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯ ಖರಗಪುರ ನಿಲ್ದಾಣದಿಂದ ಹೊರಟಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಇದು ಗಮನಕ್ಕೆ ಬಂದ ರಕ್ಷಣ ಟಿಕೆಟ್ ಪರೀಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
"ಇದು ಅವಧಿಪೂರ್ವ ಪ್ರಸವದ ಪ್ರಕರಣವಾಗಿದ್ದರಿಂದ ಮಹಿಳೆ ಹಾಗೂ ನವಜಾತ ಶಿಶುವನ್ನು ಕೊಲ್ಕತ್ತಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಾನವೀಯತೆ ಆಧಾರದಲ್ಲಿ ನಿಗದಿತ ನಿಲುಗಡೆ ಇಲ್ಲದ ಕಡೆ ಕೂಡಾ ನಿಲುಗಡೆ ನೀಡಲಾಯಿತು" ಎಂದು ಮೂಲಗಳು ಹೇಳಿವೆ.