ಧರ್ಮಶಾಲಾದ ಔಟ್ ಫೀಲ್ಡ್ ವಿಶ್ವಕಪ್ ಪಂದ್ಯಗಳಿಗೆ ಸೂಕ್ತವಾಗಿಲ್ಲ: ಜೋಸ್ ಬಟ್ಲರ್
ಹೊಸದಿಲ್ಲಿ: ಇಂಗ್ಲೆಂಡ್ ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಕ್ರಿಕೆಟ್ ವಿಶ್ವಕಪ್ನ ಮುಂಬರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಿಂದ ಹೊರಗುಳಿಯುವ ನಿರೀಕ್ಷೆ ಇದೆ. ಇದೇ ವೇಳೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ನ ಔಟ್ ಫೀಲ್ಡ್ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇದು ವಿಶ್ವಕಪ್ ಪಂದ್ಯಗಳಿಗೆ ಸೂಕ್ತವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೈದಾನದಲ್ಲಿ ಅಭ್ಯಾಸದ ಸಮಯದಲ್ಲಿ ಸ್ಪಿನ್ನರ್ ಮುಜೀಬ್ವುರ್ ರಹ್ಮಾನ್ ಅವರು ಸ್ವಲ್ಪದರಲ್ಲಿ ಗಾಯದಿಂದ ಪಾರಾದ ನಂತರ ಇಂಗ್ಲೆಂಡ್ ನ ಮಾಜಿ ಬ್ಯಾಟ್ಸ್ಮನ್ ಹಾಗೂ ಅಫ್ಘಾನಿಸ್ತಾನದ ಹಾಲಿ ಮುಖ್ಯ ಕೋಚ್ ಜೋನಾಥನ್ ಟ್ರೋಟ್ ಮೈದಾನದ ಔಟ್ಫೀಲ್ಡ್ ಕುರಿತಾಗಿ ಪ್ರಶ್ನೆಗಳನ್ನು ಎತ್ತಿದ ನಂತರ ಬಟ್ಲರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಔಟ್ಫೀಲ್ಡ್ ಕುರಿತು ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಸಾಧಾರಣ ಶ್ರೇಣಿಯನ್ನು ನೀಡಿದ್ದರೂ ವಿಶ್ವಕಪ್ ಪಂದ್ಯವನ್ನು ಆಯೋಜಿಸಲು ಅನುಮತಿ ನೀಡಲಾಗಿದೆ. ಫೀಲ್ಡಿಂಗ್ ಮಾಡುವಾಗ ಆಟಗಾರರ ಸುರಕ್ಷತೆಯ ಕುರಿತು ಚಿಂತೆ ಪಡುವಂತಾಗಿದೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮುನ್ನಾದಿನ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಜೋಸ್ ಬಟ್ಲರ್, ‘‘ನನ್ನ ಸ್ವಂತ ಅಭಿಪ್ರಾಯದ ಪ್ರಕಾರ ಇದೊಂದು ಕಳಪೆ ಔಟ್ಫೀಲ್ಡ್ ಆಗಿದೆ. ಡೈವಿಂಗ್ ಹಾಗೂ ಫೀಲ್ಡಿಂಗ್ ಮಾಡುವಾಗ ಎಚ್ಚರಿಕೆ ವಹಿಸಬೇಕಾಗಿದೆ. ಆದರೆ ಇದಕ್ಕೆ ಹೊಂದಿಕೊಳ್ಳಬೇಕಾಗಿದೆ’’ ಎಂದು ಹೇಳಿದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಅಹ್ಮದಾಬಾದ್ನಲ್ಲಿ ಗುರುವಾರ ನಡೆದಿದ್ದ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ 9 ವಿಕೆಟ್ಗಳಿಂದ ಸೋಲುಂಡಿತ್ತು. ಇದೀಗ ಗೆಲುವಿನ ಹಾದಿಗೆ ಮರಳಲು ಯತ್ನಿಸುತ್ತಿದೆ.
ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಬೆನ್ ಸ್ಟೋಕ್ಸ್ ಫಿಟ್ನೆಸ್ ಕುರಿತ ಕಳವಳದ ನಡುವೆ ಅಸುರಕ್ಷಿತ ಔಟ್ ಫೀಲ್ಡ್ ಬಗ್ಗೆಯೂ ತಲೆ ಕೆಡಿಸಿಕೊಳ್ಳಬೇಕಾಗಿದೆ.
ಇಂಗ್ಲೆಂಡ್ ತಂಡವು ಅಕ್ಟೋಬರ್15 ರಂದು ಅಫ್ಘಾನಿಸ್ತಾನವನ್ನು ಹೊಸದಿಲ್ಲಿಯಲ್ಲಿ ಎದುರಿಸಲಿದೆ.