ಶಂಭು ಗಡಿ ಬಳಿ ಪ್ರತಿಭಟನಾನಿರತ ಹಿರಿಯ ರೈತ ಹೃದಯಾಘಾತಕ್ಕೆ ಬಲಿ
ಅಂಬಾಲಾ : ಹರ್ಯಾಣದ ಅಂಬಾಲಾ ಸಮೀಪ ಶಂಭು ಗಡಿಯಲ್ಲಿ ಪ್ರತಿಭಟನಾನಿರತ ಹಿರಿಯ ರೈತರೋರ್ವರು ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇತರ ರೈತರೊಂದಿಗೆ ಪ್ರತಿಭಟನೆಯಲ್ಲಿ ತೊಡಗಿಕೊಂಡಿದ್ದ ಜ್ಞಾನ ಸಿಂಗ್ (63) ಬೆಳಿಗ್ಗೆ ಎದೆನೋವು ಎಂದು ಹೇಳಿಕೊಂಡಿದ್ದು, ಅವರನ್ನು ತಕ್ಷಣವೇ ಪಂಜಾಬಿನ ರಾಜಪುರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಪಟಿಯಾಲಾದ ರಾಜೇಂದ್ರ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.
ಪಂಜಾಬಿನ ಗುರುದಾಸಪುರ ಜಿಲ್ಲೆಯ ನಿವಾಸಿ ಸಿಂಗ್ ‘ದಿಲ್ಲಿ ಚಲೋ’ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಎರಡು ದಿನಗಳ ಹಿಂದೆ ಶಂಭು ಗಡಿಗೆ ಬಂದಿದ್ದರು.
ಎಂಎಸ್ಪಿ ಕುರಿತು ಕಾನೂನು ಮತ್ತು ಸಾಲಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಡ ಹೇರಲು ರೈತರ ‘ದಿಲ್ಲಿ ಚಲೋ ’ ಆಂದೋಲನವನ್ನು ಸಂಯುಕ್ತ ಕಿಸಾನ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಮುನ್ನಡೆಸುತ್ತಿವೆ.
ಮಂಗಳವಾರ ತಮ್ಮ ಜಾಥಾವನ್ನು ಆರಂಭಿಸಿದ್ದ ರೈತರು ಆಗಿನಿಂದ ಪಂಜಾಬ್ ಮತ್ತು ಹರ್ಯಾಣದ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಮೊಕ್ಕಾಂ ಹೂಡಿದ್ದಾರೆ.
ಗುರುವಾರ ರೈತ ನಾಯಕರು ಮತ್ತು ಕೇಂದ್ರ ಸರಕಾರದ ನಡುವೆ ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ಯಾವುದೇ ನಿರ್ಧಾರ ಸಾಧ್ಯವಾಗಿರಲಿಲ್ಲ. ಮುಂದಿನ ಸುತ್ತಿನ ಮಾತುಕತೆಗಳು ರವಿವಾರ ನಡೆಯಲಿವೆ.