"ಏನು ಬೇಕಾದರೂ ಹ್ಯಾಕ್ ಮಾಡಬಹುದು": ಇವಿಎಂ ಅನ್ನು ಸಮರ್ಥಿಸಿದ ಬಿಜೆಪಿ ಮುಖಂಡ ರಾಜೀವ್ ಚಂದ್ರಶೇಖರ್ ಗೆ ಎಲಾನ್ ಮಸ್ಕ್ ತಿರುಗೇಟು

Update: 2024-06-16 09:34 GMT

ಎಲಾನ್ ಮಸ್ಕ್ / ರಾಜೀವ್ ಚಂದ್ರಶೇಖರ್ (Photo: PTI)

ಹೊಸದಿಲ್ಲಿ: ಇವಿಎಂ ಕುರಿತು ಕೋಟ್ಯಧಿಪತಿ ಉದ್ಯಮಿ ಎಲಾನ್ ಮಸ್ಕ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಇಂತಹ ಆರೋಪಗಳು ಯಾವುದೇ ಆಧಾರಗಳಿಲ್ಲದ ಅತೀ ಸಾಮಾನ್ಯೀಕರಣ ಹೇಳಿಕೆ ಎಂದು ಹೇಳಿದ್ದಾರೆ.

ಅಪಾಯ ಕನಿಷ್ಠ ಪ್ರಮಾಣದ್ದಾಗಿದ್ದರೂ, ಮನುಷ್ಯರು ಅಥವಾ ಕೃತಕ ಬುದ್ಧಿಮತ್ತೆ(AI)ಯಿಂದ ವಿದ್ಯುನ್ಮಾನ ಮತ ಯಂತ್ರಗಳನ್ನು ಹ್ಯಾಕಿಂಗ್ ಮಾಡುವ ಅಪಾಯ ದೊಡ್ಡ ಪ್ರಮಾಣದಲ್ಲಿರುವುದರಿಂದ, ಅವುಗಳನ್ನು ಹಿಂಪಡೆಯಬೇಕು ಎಂದು ಎಕ್ಸ್ ಸಾಮಾಜಿಕ ಪೋಸ್ಟ್ ನಲ್ಲಿ ಎಲಾನ್ ಮಸ್ಕ್ ಆಗ್ರಹಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಯವರ ಎರಡನೆ ಅವಧಿಯ ಸಚಿವ ಸಂಪುಟದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವರಾಗಿದ್ದ ರಾಜೀವ್ ಚಂದ್ರಶೇಖರ್, ಎಲಾನ್ ಮಸ್ಕ್ ಅವರ ಅನಿಸಿಕೆಗಳಿಗೆ ತಿರುಗೇಟು ನೀಡಿ, ನಿಮ್ಮ ಈ ಅನಿಸಿಕೆಯು ಪ್ರಮಾಣೀಕೃತ ವೇದಿಕೆಗಳ ಮೂಲಕ ಅಂತರ್ಜಾಲ ಸಂಪರ್ಕ ಹೊಂದಿರುವ EVM ಬಳಸುವ ಅಮೆರಿಕ ಮತ್ತು ಇನ್ನಿತರ ಪ್ರಾಂತ್ಯಗಳಿಗೆ ಮಾತ್ರ ಅನ್ವಯವಾಗಬಹುದು ಎಂದು ಹೇಳಿದ್ದಾರೆ.

ಆದರೆ, ರೂಢಿಗತ ವಿನ್ಯಾಸ, ಸುರಕ್ಷಿತ ಹಾಗೂ ಯಾವುದೇ ಅಂತರ್ಜಾಲ ಸಂಪರ್ಕ ಅಥವಾ ಮಾಧ್ಯಮದಿಂದ ಪ್ರತ್ಯೇಕವಾಗಿರುವ ಇವಿಎಂಗಳಿರುವ ಭಾರತಕ್ಕೆ ಈ ವಿಷಯ ಅನ್ವಯಿಸುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಮಸ್ಕ್‌, ಏನು ಬೇಕಾದರೂ ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ.

ಇಬ್ಬರ ವಾಗ್ಯುದ್ಧದ ನಡುವೆ ಪ್ರವೇಶಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಮಸ್ಕ್ ಅವರ ಅನಿಸಿಕೆಯನ್ನು ಬೆಂಬಲಿಸಿದ್ದಾರೆ. ಇವಿಎಂ ಗಳ ವಿಶ್ವಾಸಾರ್ಹತೆ ಪ್ರಶ್ನಿಸುತ್ತಾ ಬರುತ್ತಿರುವ ಅವರು, ಇವಿಎಂಗಳನ್ನು ʼBlack Boxʼಗಳು ಎಂದು ವ್ಯಾಖ್ಯಾನಿಸಿದ್ದಾರೆ.

ಈ ನಡುವೆ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡಾ ಎಲಾನ್ ಮಸ್ಕ್ ಅವರ ಅನಿಸಿಕೆಯನ್ನು ಟೀಕಿಸಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಮುಕ್ತಾಯಗೊಂಡ ಸುದೀರ್ಘ ಲೋಕಸಭಾ ಚುನಾವಣಾ ಪ್ರಕ್ರಿಯೆಯ ಸಂದರ್ಭದಲ್ಲಿ ಆಡಳಿತಾರೂಢ ಬಿಜೆಪಿಯು ತನ್ನ ಪರ ಜನಮತವನ್ನು ಪಡೆಯಲು ವಿದ್ಯುನ್ಮಾನ ಮತ ಯಂತ್ರಗಳನ್ನು ತಿರುಚಬಹುದು ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ, ಈ ಕುರಿತು ಸ್ಪಷ್ಟೀಕರಣ ನೀಡಿದ್ದ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ವಿದ್ಯುನ್ಮಾನ ಮತ ಯಂತ್ರಗಳು ಶೇ. 100ರಷ್ಟು ಸುರಕ್ಷಿತ ಎಂದು ಭರವಸೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News