ಚಂದ್ರಯಾನ-3ರ ಉಡಾವಣಾ ವೇದಿಕೆ ನಿರ್ಮಿಸಿದ್ದಇಂಜಿನಿಯರ್‌ಗಳಿಗೆ 17 ತಿಂಗಳುಗಳಿಂದ ವೇತನವಿಲ್ಲ: ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Update: 2023-08-24 15:39 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅದು ಚಂದ್ರಯಾನ-3ಕ್ಕಾಗಿ ಉಡಾವಣಾ ವೇದಿಕೆಯನ್ನು ನಿರ್ಮಿಸಿದ್ದ ರಾಂಚಿಯ ಹಿಂದುಸ್ಥಾನ ಇಂಜಿನಿಯರಿಂಗ್ ಕಾರ್ಪೊರೇಷನ್ (ಎಚ್‌ಇಸಿ)ನ ಇಂಜಿನಿಯರ್‌ಗಳಿಗೆ ಕಳೆದ 17 ತಿಂಗಳುಗಳಿಂದಲೂ ವೇತನವನ್ನು ಪಾವತಿಸಿಲ್ಲ ಎಂದು ಆರೋಪಿಸಿದೆ.

ಚಂದ್ರಯಾನ-3 ಅಭಿಯಾನವನ್ನು ಯಶಸ್ವಿಗೊಳಿಸಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಪ್ರಶಂಸಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು, ‘ವಿಕ್ರಮ ಲ್ಯಾಂಡರ್ ಚಂದ್ರನ ಮೇಲೆ ಇಳಿದ ಸಂಭ್ರಮ ಮತ್ತು ಹೆಮ್ಮೆ ಸುದೀರ್ಘ ಕಾಲ ನಮ್ಮೊಂದಿಗೆ ಉಳಿಯಲಿದೆ’ ಎಂದು ಹೇಳಿದರು. ಇದೇ ವೇಳೆ ಇಂಜಿನಿಯರ್‌ಗಳಿಗೆ ಕಳೆದ 17 ತಿಂಗಳುಗಳಿಂದಲೂ ವೇತನ ಪಾವತಿಯಾಗಿಲ್ಲ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು,‘ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಅವರ ನಾಯಕತ್ವವು ನಿಜಕ್ಕೂ ಇತಿಹಾಸವನ್ನೇ ಸೃಷ್ಟಿಸಿದೆ,ಅವರಿಗೆ ಮತ್ತು ಅವರ ತಂಡಕ್ಕೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.

ಆದರೆ ತನ್ನ ಬೂಟಾಟಿಕೆಗಾಗಿ ಪ್ರಧಾನಿ ಕೆಲವರಿಗೆ ಉತ್ತರಿಸಲೇಬೇಕು. ಲ್ಯಾಂಡಿಂಗ್ ಬಳಿಕ ತಕ್ಷಣವೇ ಟಿವಿ ಪರದೆಯಲ್ಲಿ ಕಾಣಿಸಿಕೊಂಡ ನೀವು (ಮೋದಿ) ಅದರ ಶ್ರೇಯಸ್ಸನ್ನು ನಿಮ್ಮದಾಗಿಸಿಕೊಂಡಿದ್ದೀರಿ,ಆದರೆ ವಿಜ್ಞಾನಿಗಳನ್ನು ಮತ್ತು ಇಸ್ರೋವನ್ನು ಬೆಂಬಲಿಸುವಲ್ಲಿ ನಿಮ್ಮ ಸರಕಾರವು ದಯನೀಯವಾಗಿ ವಿಫಲಗೊಂಡಿದ್ದೇಕೆ’ ಎಂದು ಪ್ರಶ್ನಿಸಿದರು.

‘ಚಂದ್ರಯಾನ-3ಕ್ಕಾಗಿ ಶ್ರಮಿಸಿದ್ದ ಎಚ್‌ಇಸಿ ಇಂಜಿನಿಯರ್‌ಗಳಿಗೆ ಕಳೆದ 17 ತಿಂಗಳುಗಳಿಂದಲೂ ವೇತನ ಪಾವತಿಯಾಗಿಲ್ಲ ಏಕೆ? ಇಂತಹ ಪ್ರಮುಖ ಅಭಿಯಾನದ ಬಜೆಟ್‌ನ್ನು ಶೇ.32ರಷ್ಟು ಕಡಿತಗೊಳಿಸಿದ್ದು ಏಕೆ? ಅವರು ನಮ್ಮ ದೇಶದ ಹೀರೋಗಳಾಗಿದ್ದಾರೆ,ಅವರು ವಿಶ್ವದರ್ಜೆಯ ಬಾಹ್ಯಾಕಾಶ ಸಂಶೋಧನಾ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. ಆದರೆ ಅವರ ಪ್ರತಿಭೆ ಮತ್ತು ಕಠಿಣ ಶ್ರಮಕ್ಕೆ ಎಳ್ಳಷ್ಟೂ ಗೌರವವನ್ನು ನೀವು ನೀಡಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ಅದು ವಿಜ್ಞಾನಿಗಳ ಸಾಧನೆಗಳ ಅಪೂರ್ವ ಕ್ಷಣವಾಗಿದ್ದಾಗ ಅದರ ಹೆಗ್ಗಳಿಕೆಯನ್ನು ನೀವು ಕಿತ್ತುಕೊಂಡಿದ್ದೀರಿ ’ ಎಂದು ವೇಣುಗೋಪಾಲ ಕಿಡಿಕಾರಿದರು.

ಸೋನಿಯಾ ಸಂತಸ

ಈ ನಡುವೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು,ಇಸ್ರೋದ ಅದ್ಭುತ ಸಾಧನೆಯಿಂದ ತಾನು ರೋಮಾಂಚನಗೊಂಡಿದ್ದೇನೆ,ಅದು ಎಲ್ಲ ಭಾರತೀಯರಿಗೆ, ವಿಶೇಷವಾಗಿ ಯುವ ಪೀಳಿಗೆಗೆ ಅತ್ಯಂತ ಹೆಮ್ಮೆ ಮತ್ತು ಸಂಭ್ರಮದ ವಿಷಯವಾಗಿದೆ ಎಂದು ಪ್ರಶಂಸಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News