97 ವರ್ಷದಲ್ಲೂ ವಕೀಲ ವೃತ್ತಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇರಳದ ವ್ಯಕ್ತಿ!
ತಿರುವನಂತಪುರ : ಪಾಲಕ್ಕಾಡ್‌ನ 97 ವರ್ಷದ ವಕೀಲರಾದ ಪಿ. ಬಾಲಸುಬ್ರಮಣೀಯನ್ ಮೆನನ್ ಅವರು 73 ವರ್ಷ 60 ದಿನಗಳ ಕಾಲ ವಕೀಲರಾಗಿ ಕಾರ್ಯ ನಿರ್ವಹಿಸುವ ಮೂಲಕ ಸುದೀರ್ಘ ಕಾಲ ಸೇವೆ ಸಲ್ಲಿಸಿದ ವಕೀಲರಾಗಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದಾರೆ.
ಕಿರಿಯ ವಯಸ್ಸಿನ ವಕೀಲರಂತೆ ಮನೆನ್ ಅವರು ಈಗಲೂ ತುಂಬಾ ಕ್ರಿಯಾಶೀಲರಾಗಿದ್ದಾರೆ. ಅವರು ಪ್ರತಿ ದಿನ ನ್ಯಾಯಾಲಯಕ್ಕೆ ತೆರಳುತ್ತಾರೆ ಹಾಗೂ ತನ್ನ ಕಕ್ಷಿದಾರರನ್ನು ಭೇಟಿಯಾಗುತ್ತಾರೆ.
‘‘ನನ್ನನ್ನು ನಂಬಿ ಕಕ್ಷಿದಾರರು ಪ್ರಕರಣಗಳನ್ನು ತೆಗೆದುಕೊಂಡು ಬರುತ್ತಾರೆ. ಆದುದರಿಂದ ನಾನು ಅವರಿಗೆ ಎಷ್ಟು ಸಾದ್ಯವೋ ಅಷ್ಟು ನೆರವು ನೀಡುತ್ತೇನೆ’’ ಎಂದು ಅವರು ಹೇಳಿದ್ದಾರೆ.
ಪಾಲೆಕ್ಕಾಡ್‌ನ ಸಾಂಪ್ರದಾಯಿಕ ಕುಟುಂಬದಿಂದ ಬಂದ ಮೆನನ್ ಅವರು, ನ್ಯಾಯಾಲಯಗಳಲ್ಲಿ ಹೆಚ್ಚು ವಾದಿಸುವಲ್ಲಿ ನಂಬಿಕೆ ಇಲ್ಲ ಎಂದು ಹೇಳುತ್ತಾರೆ. ಅಲ್ಲದೆ, ಅವರ ವಾದ ಹಾಗೂ ಪಾಟಿ ಸವಾಲು ಕೂಡ ಸಂಕ್ಷಿಪ್ತವಾಗಿರುತ್ತದೆ.
ಮದ್ರಾಸ್ ಕಾನೂನು ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಪಡೆದ ಬಳಿಕ ಮೆನನ್ ಅವರು 1950ರಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ‘‘ನೀವು ಯಾವಾಗ ನಿವೃತ್ತಿಯಾಗುತ್ತೀರಿ?’’ ಎಂದು ಯಾರಾದರೂ ಕೇಳಿದರೆ, ಅವರು, ‘‘ಎಲ್ಲಿವರೆಗೆ ನನ್ನ ಆರೋಗ್ಯ ಸಹಕರಿಸುತ್ತದೋ, ಅಲ್ಲಿವರೆಗೆ ನನ್ನ ಕಕ್ಷಿದಾರರನ್ನು ಭೇಟಿಯಾಗುತ್ತೇನೆ’’ ಎನ್ನುತ್ತಾರೆ.
ಈ ದಾಖಲೆ ಇತರರಿಗೆ ಪ್ರೇರಣೆಯಾಗಬಹುದು ಎಂದು ಮೆನನ್ ಅಭಿಪ್ರಾಯ.