ಸಮುದ್ರದ ತಳದಲ್ಲಿದ್ದರೂ ಪತ್ತೆಹಚ್ಚಿ ಕ್ರಮಕೈಗೊಳ್ಳುತ್ತೇವೆ: ವಾಣಿಜ್ಯ ಹಡಗುಗಳ ಮೇಲಿನ ದಾಳಿ ಕುರಿತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Update: 2023-12-26 12:34 GMT

ರಾಜನಾಥ್‌ ಸಿಂಗ್‌ | Photo: PTI 

ಹೊಸದಿಲ್ಲಿ: ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳ ಹಿಂದಿರುವವರು “ಸಮುದ್ರದ ತಳದಲ್ಲಿದ್ದರೂ” ಅವರನ್ನು ಪತ್ತೆಹಚ್ಚಿ ಕ್ರಮಕೈಗೊಳ್ಳುವುದಾಗಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. ಭಾರತೀಯ ನೌಕಾಪಡೆಯು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ವಿಶಾಖಪಟ್ಣಂ ಕ್ಲಾಸ್‌ ನಾಲ್ಕು ಯುದ್ಧ ನೌಕೆಗಳ ಪೈಕಿ ಮೂರನೆಯದಾದ ಐಎನ್‌ಎಸ್‌ ಇಂಫಾಲ್‌ ಇದರ ಕಾರ್ಯಾರಂಭದ ಕಾರ್ಯಕ್ರಮದಲ್ಲಿ ಇಂದು ಅವರು ಮಾತನಾಡುತ್ತಿದ್ದರು.

ಎಂವಿ ಚೆಮ್‌ ಪ್ಲುಟೋ ಮೇಲೆ ಅರಬ್ಬೀ ಸಾಗರದಲ್ಲಿ ಹಾಗೂ ಎಂವಿ ಸಾಯಿ ಬಾಬಾ ಮೇಲೆ ರೆಡ್‌ ಸೀ ನಲ್ಲಿ ನಡೆದ ಡ್ರೋನ್‌ ದಾಳಿಯನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ, ಸರ್ವೇಕ್ಷಣೆಯನ್ನು ಹೆಚ್ಚಿಸಿದೆ, ಯಾರೇ ಈ ದಾಳಿ ಮಾಡಿರಲಿ, ಅವರು ಸಾಗರ ತಳದಲ್ಲಿದ್ದರೂ ಅವರನ್ನು ಹುಡುಕಿ ಕ್ರಮ ಜರುಗಿಸುತ್ತೇವೆ,” ಎಂದು ರಾಜನಾಥ್‌ ಸಿಂಗ್‌ ಘೋಷಿಸಿದರು.

ಭಾರತವು ಸಂಪೂರ್ಣ ಹಿಂದೂ ಮಹಾಸಾಗರ ಪ್ರದೇಶದ ಭದ್ರತೆ ಪೂರೈಕೆದಾರನಾಗಿದ್ದು ಸರ್ಕಾರವು ಸ್ನೇಹಪರ ದೇಶಗಳೊಂದಿಗೆ ಕೆಲಸ ಮಾಡಿ ಈ ಪ್ರಾಂತ್ಯದಲ್ಲಿ ನೌಕೆಗಳ ಸುರಕ್ಷತೆಗೆ ಕ್ರಮಕೈಗೊಳ್ಳುವುದು ಎಂದು ಅವರು ಹೇಳಿದರು.

ಎಂವಿ ಚೆಮ್‌ ಪ್ಲುಟೋ ಮೇಲೆ ಎರಡು ದೊನಗಳ ನಡೆದಿದ್ದು ಡ್ರೋನ್‌ ದಾಳಿ ಎಂದು ನೌಕಾಪಡೆ ದೃಢಪಡಿಸಿದ ನಂತರ ಸಚಿವರ ಹೇಳಿಕೆ ಬಂದಿದೆ.

ಇರಾನ್‌ ನಿಂದ ಈ ಡ್ರೋನ್‌ ದಾಳಿ ನಡೆದಿತ್ತು ಎಂದು ಅಮೆರಿಕಾ ಈಗಾಗಲೇ ಹೇಳಿದೆ.

ಭಾರತದ ಪಶ್ಚಿಮ ಕರಾವಳಿಯಿಂದ 400 ಕಿಮೀ ದೂರದಲ್ಲಿ ನಡೆದ ಈ ದಾಳಿಯು ಯೆಮೆನ್‌ನಲ್ಲಿರುವ ಇರಾನ್‌ ಬೆಂಬಲಿತ ಹೌದಿ ಬಂಡುಕೋರರು ರೆಡ್‌ ಸೀ ಹಡಗು ಹಾದಿಯಲ್ಲಿ ಇಸ್ರೇಲ್-ಗಾಝಾ ಯುದ್ಧದ ನಡುವೆ ಗುರಿಯಾಗಿಸುತ್ತಿದ್ದಾರೆ.

ಲೈಬೀರಿಯಾ ಧ್ವಜ ಹೊಂದಿದ ಈ ತೈಲ ಟ್ಯಾಂಕರ್‌ ಸೌದಿ ಅರೇಬಿಯಾದಿಂದ ಮಂಗಳೂರಿನತ್ತ ಸಾಗುತ್ತಿದ್ದಾಗ ದಾಳಿ ನಡೆದಿತ್ತು. ಇದರಿಂದ ಹಡಗಿನಲ್ಲಿ ಬೆಂಕಿ ಹತ್ತಿಕೊಂಡಿತ್ತು. ಇಪ್ಪತ್ತೊಂದು ಸಿಬ್ಬಂದಿಗಳಿದ್ದ ಈ ಹಡಗು ಇಂದು ಮುಂಬೈಗೆ ಆಗಮಿಸಿದೆ. ಎಲ್ಲಾ ಪ್ರಕ್ರಿಯೆಗಳ ನಂತರ ಅದರ ಸರಂಜಾಮನ್ನು ಬೇರೆ ಹಡಗಿಗೆ ವರ್ಗಾಯಿಸಲಾಗುವುದೆಂದು ತಿಳಿದು ಬಂದಿದ್ದು ನಂತರ ಹಡಗನ್ನು ದುರಸ್ತಿಗೊಳಿಸಲಾಗುವುದು.

ಎರಡನೇ ತೈಲ ಟ್ಯಾಂಕರ್‌ ಎಂ ವಿ ಸಾಯಿ ಬಾಬಾದ ಮೇಲೆ ಕೂಡ ಡ್ರೋನ್‌ ದಾಳಿ ನಡೆದಿದ್ದು ಅದರಲ್ಲಿ ಭಾರತದ 25 ಮಂದಿ ಸಿಬ್ಬಂದಿಯಿದ್ದರು, ಅದೃಷ್ಟವಶಾತ್‌ ಯಾರಿಗೂ ಹಾನಿಯಾಗಿಲ್ಲ.

ಹಡಗುಗಳ ಮೇಲಿನ ದಾಳಿಯನ್ನು ತಪ್ಪಿಸಲು ಮೂರು ಯುದ್ಧನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News