ಅನಂತ್ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಚಾಟಿಸಿ: ಮೋದಿಗೆ ಖರ್ಗೆ ಸವಾಲು

Update: 2024-03-12 03:31 GMT
Photo: PTI

ಹೊಸದಿಲ್ಲಿ: ಭಾರತದ ಸಂವಿಧಾನ ತಿದ್ದುಪಡಿಗೊಳಿಸಲು ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆಯ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಧೈರ್ಯವಿದ್ದರೆ ವೈಯಕ್ತಿಕವಾಗಿ ಈ ಹೇಳಿಕೆಯನ್ನು ಖಂಡಿಸಿ, ಅವರನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದ್ದಾರೆ.

ಸಂವಿಧಾನವನ್ನು ತಿರುಚುವ ಪ್ರಯತ್ನ ಮಾಡಿದರೆ ದೇಶಾದ್ಯಂತ ಪ್ರತಿಭಟನೆ ಎದುರಿಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಸಂವಿಧಾನಕ್ಕೆ ಅಪಾಯ ಎದುರಾಗಿರುವ ಹಿನ್ನೆಲೆಯಲ್ಲಿ ಈ ಚುನಾವಣೆ ಸಾಮಾಜಿಕ ನ್ಯಾಯ ಮತ್ತು ಶೋಷಣೆ ನಡುವಿನ ಹೋರಾಟವಾಗಿ ಮಾರ್ಪಟ್ಟಿದೆ ಎಂದು ರಾಹುಲ್ಗಾಂಧಿ ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ-ಆರೆಸ್ಸೆಸ್ ಗಳನ್ನು ಮನುವಾದಿ ಸಂಘಟನೆಗಳು ಎಂದು ಕರೆದಿರುವ ಖರ್ಗೆ, ಆಡಳಿತಾರೂಢ ಪಕ್ಷ ಎಂದೂ ಸಾಮಾಜಿಕ ನ್ಯಾಯ, ಎಸ್ಸಿ/ಎಸ್ಟಿ ಮೀಸಲಾತಿ, ಸಮಾನತೆಯ ಹಕ್ಕು ಮತ್ತು ಸಾಮಾಜಿಕ ನ್ಯಾಯದಂಥ ತತ್ವಗಳನ್ನು ಒಳಗೊಂಡ ಅಂಬೇಡ್ಕರ್ ಅವರ ಸಂವಿಧಾನವನ್ನು ಒಪ್ಪಿಕೊಂಡಿಲ್ಲ. ಇದನ್ನು ತಿರುಚುವ ಬಗ್ಗೆ ಆ ಪಕ್ಷದ ಮುಖಂಡರು ಪದೇ ಪದೇ ಹೇಳಿಕೆ ನೀಡುತ್ತಿರುವುದು ಅವರ ರಹಸ್ಯ ಕಾರ್ಯಸೂಚಿಯನ್ನು ಬಿಂಬಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು 400 ಪಾರ್ ಎಂದು ಹೇಳಿಕೆ ನೀಡುತ್ತಿರುವುದು ಈ ಅರ್ಥದಲ್ಲಿ. ಆದರೆ ಬಹಿರಂಗವಾಗಿ ಸಂವಿಧಾನ ಬದಲಾಯಿಸುವ ಬಗ್ಗೆ ಹೇಳುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ವಿಶ್ಲೇಷಿಸಿದರು.

ಈ ಹಿಂದೆ ಕೂಡಾ ಅನಂತ್ ಕುಮಾರ್ ಹೆಗಡೆ ಹಲವು ಬಾರಿ ಇಂಥ ಹೇಳಿಕೆ ನೀಡಿದ್ದು, ಅವರಿಂದ ವಿವರಣೆ ಕೇಳಲಾಗುತ್ತಿದೆ ಎಂದು ಬಿಜೆಪಿ ಹೇಳಿರುವುದು ಹಾಸ್ಯಾಸ್ಪದ ಎಂದು ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News