ಚುನಾವಣಾ ಬಾಂಡ್ ದತ್ತಾಂಶವನ್ನು ಹಂಚಿಕೊಳ್ಳಲು ಜೂನ್ 30ರವರೆಗೆ ಸಮಯಾವಕಾಶ ವಿಸ್ತರಿಸಿ : ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ ಎಸ್‌ಬಿಐ
ಹೊಸದಿಲ್ಲಿ: ಚುನಾವಣಾ ಬಾಂಡ್ ಬಗೆಗಿನ ದತ್ತಾಂಶವನ್ನು ಒದಗಿಸಲು ಸುಪ್ರೀಂಕೋರ್ಟ್‌ನಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೆಚ್ಚು ಸಮಯಾವಕಾಶವನ್ನು ಕೋರಿದೆ. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಚುನಾವಣಾ ನಿಧಿ ಒದಗಿಸಲು ಅನುವು ಮಾಡಿಕೊಟ್ಟಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಇತ್ತೀಚೆಗೆ ಸುಪ್ರೀಂಕೋರ್ಟ್ ರದ್ದುಗೊಳಿಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ. ಮಾರ್ಚ್ 6 ರೊಳಗೆ ಪ್ರತಿ ರಾಜಕೀಯ ಪಕ್ಷವೂ ಚುನಾವಣಾ ಬಾಂಡ್ ಮೂಲಕ ನಗದೀಕರಿಸಿಕೊಂಡಿರುವ ವಿವರಗಳನ್ನು ಬಹಿರಂಗಗೊಳಿಸಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
"ಎಪ್ರಿಲ್ 12, 2019ರಂದು ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶದಿಂದ ಇಲ್ಲಿಯವರೆಗೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಮೂಲಕ ಸ್ವೀಕರಿಸಿರುವ ದೇಣಿಗೆಯ ವಿವರಗಳನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ರಾಜಕೀಯ ಪಕ್ಷಗಳಿಂದ ನಗದೀಕರಣಗೊಂಡಿರುವ ಪ್ರತಿ ಚುನಾವಣಾ ಬಾಂಡ್‌ನ ವಿವರಗಳಲ್ಲಿ ನಗದೀಕರಣದ ದಿನಾಂಕ ಹಾಗೂ ಚುನಾವಣಾ ಬಾಂಡ್‌ನ ಮುಖಬೆಲೆಯನ್ನು ಕಡ್ಡಾಯವಾಗಿ ಬಹಿರಂಗಗೊಳಿಸಬೇಕು" ಎಂದು ನ್ಯಾಯಾಲಯವು ಆದೇಶಿಸಿತ್ತು.
ಚುನಾವಣಾ ಬಾಂಡ್ ಯೋಜನೆ ಅನ್ನು ರದ್ದುಗೊಳಿಸಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಈ ಯೋಜನೆಯು ಸಂವಿಧಾನದ ವಾಕ್ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ಹೇಳಿತ್ತು. ಈ ಯೋಜನೆಯಿಂದ ಚುನಾವಣಾ ರಾಜಕಾರಣದಲ್ಲಿ ಪಾರದರ್ಶಕತೆ ಬರುತ್ತದೆ ಹಾಗೂ ಕಪ್ಪು ಹಣದ ಚಲಾವಣೆಯನ್ನು ನಿಯಂತ್ರಿಸಬಹುದಾಗಿದೆ ಎಂಬ ಕೇಂದ್ರ ಸರಕಾರದ ವಾದವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಳ್ಳಿ ಹಾಕಿದ್ದರು.