Fact Check| ಕಾಂಗ್ರೆಸ್ ಪ್ರಣಾಳಿಕೆ ಸರಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಭರವಸೆ ನೀಡಿದೆ ಎಂದು ಸುಳ್ಳು ಹೇಳಿದ ಪ್ರಧಾನಿ ಮೋದಿ

Update: 2024-05-04 14:43 GMT

ನರೇಂದ್ರ ಮೋದಿ | PC ; PTI 

ಹೊಸದಿಲ್ಲಿ: ಗುರುವಾರ ಗುಜರಾತಿನ ಸುರೇಂದ್ರನಗರದಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ತನ್ನ ಚುನಾವಣಾ ಪ್ರಚಾರದ ಮುಖ್ಯ ಅಸ್ತ್ರವಾಗಿರುವ ಮುಸ್ಲಿಮ್ ವಿರೋಧಿ ಸಂದೇಶವನ್ನು ಪುನರುಚ್ಚರಿಸಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಸರಕಾರಿ ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ವಿಶೇಷ ಕೋಟಾ ಸೃಷ್ಟಿಸುವುದಾಗಿ ಭರವಸೆ ನೀಡಿದೆ ಎಂಬ ಹೊಸ ಆರೋಪವನ್ನೂ ಅವರು ಸೇರಿಸಿದ್ದಾರೆ.

‘ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯೊಂದೂ ಅಂಶವು ತುಷ್ಟೀಕರಣ, ಓಲೈಕೆಗಳಿಂದ ತುಂಬಿದೆ. ಸರಕಾರಿ ಟೆಂಡರ್‌ಗಳಲ್ಲಿ ಅಲ್ಪಸಂಖ್ಯಾತರಿಗೆ, ಮುಸ್ಲಿಮರಿಗೆ ನಿಗದಿತ ಕೋಟಾ ಇರಲಿದೆ ಎಂದು ಅವರು ಲಿಖಿತವಾಗಿ ಹೇಳಿದ್ದಾರೆ. ಹಾಗಾದರೆ ಇನ್ನು ಮುಂದೆ ಸರಕಾರಿ ಗುತ್ತಿಗೆಗಳನ್ನು ಧರ್ಮದ ಆಧಾರದಲ್ಲಿ ನೀಡಲಾಗುವುದೇ ಮತ್ತು ಅದಕ್ಕಾಗಿ ಮೀಸಲಾತಿಯನ್ನು ತರಲಾಗಿದೆಯೇ?’ ಎಂದ ಮೋದಿ, ಸರಕಾರಿ ಗುತ್ತಿಗೆಗಳನ್ನು ಯಾವಾಗಲೂ ಸೂಕ್ತ ಅರ್ಹತೆಯ ಆಧಾರದಲ್ಲಿ ನೀಡಲಾಗುತ್ತದೆ ಮತ್ತು ಧರ್ಮ ಹಾಗೂ ಜಾತಿಯ ಆಧಾರದಲ್ಲಿ ಕೋಟಾಗಳನ್ನು ನಿಗದಿಗೊಳಿಸುವುದು ತಪ್ಪಾಗುತ್ತದೆ. ಆದರೂ ಕಾಂಗ್ರೆಸ್ ತನ್ನ ‘ವೋಟ್ ಬ್ಯಾಂಕ್’ಗಾಗಿ ಅದನ್ನು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ ಮೋದಿಯವರ ಹೇಳಿಕೆಯ ವಾಸ್ತವಿಕ ಆಧಾರವೇನು? 2024ರ ಲೋಕಸಭಾ ಚುನಾವಣೆಗಳಿಗೆ ಕಾಂಗ್ರೆಸಿನ ಪ್ರಣಾಳಿಕೆಯು ನಿಜಕ್ಕೂ ಸರಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಕೋಟಾಗಳನ್ನು ಕಲ್ಪಿಸುವುದಾಗಿ ಪ್ರಸ್ತಾವಿಸಿದೆಯೇ?

ಇದಕ್ಕೆ ಸಂಕ್ಷಿಪ್ತ ಉತ್ತರ; ಇಲ್ಲ

ಕಾಂಗ್ರೆಸ್ ಪ್ರಣಾಳಿಕೆಯು ಎರಡು ಕಡೆಗಳಲ್ಲಿ ‘ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆ’ಗಳನ್ನು ಉಲ್ಲೇಖಿಸಿದೆ. ಮೊದಲನೆಯದು ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಸಂಬಂಧಿಸಿದ ‘ಸಮಾನತೆ’ವಿಭಾಗದಲ್ಲಿ ಮತ್ತು ಎರಡನೆಯದು ‘ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ’ವಿಭಾಗದಲ್ಲಿ. ಅಲ್ಲಿ ಏನು ಹೇಳಲಾಗಿದೆ ಎನ್ನುವುದು ಇಲ್ಲಿದೆ;

ಪುಟ 6,ಪ್ಯಾರಾ 8:

ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರಿಗೆ ಹೆಚ್ಚು ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ನೀಡಲು ಸಾರ್ವಜನಿಕ ಖರೀದಿ ನೀತಿಯ ವ್ಯಾಪ್ತಿಯನ್ನು ವಿಸ್ತರಿಸಲಾಗುವುದು.

ಪುಟ 8,ಪ್ಯಾರಾ 6:

ಅಲ್ಪಸಂಖ್ಯಾತರು ಶಿಕ್ಷಣ,ಆರೋಗ್ಯ,ಸರಕಾರಿ ಉದ್ಯೋಗ, ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳು, ಕೌಶಲ್ಯಾಭಿವೃದ್ಧಿ,ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವಕಾಶಗಳ ತಮ್ಮ ನ್ಯಾಯಯುತ ಪಾಲನ್ನು ತಾರತಮ್ಯವಿಲ್ಲದೆ ಪಡೆಯುವುದನ್ನು ನಾವು ಖಚಿತ ಪಡಿಸುತ್ತೇವೆ.

ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರಿದ ಗುತ್ತಿಗೆದಾರರಿಗೆ ಹೆಚ್ಚಿನ ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳನ್ನು ನೀಡುವುದಾಗಿ ಮತ್ತು ಅಲ್ಪಸಂಖ್ಯಾತರು ಸಾರ್ವಜನಿಕ ಕಾಮಗಾರಿಗಳ ಗುತ್ತಿಗೆಗಳಲ್ಲಿ ಅವಕಾಶಗಳ ತಮ್ಮ ನ್ಯಾಯಯುತ ಪಾಲನ್ನು ತಾರತಮ್ಯವಿಲ್ಲದೆ ಪಡೆಯುವುದನ್ನು ತಾನು ಖಚಿತಪಡಿಸುವುದಾಗಿ ಕಾಂಗ್ರೆಸ್ ಪಕ್ಷವು ಹೇಳಿರುವುದು ಇಲ್ಲಿ ಸ್ಪಷ್ಟವಾಗಿದೆ.

ಮೋದಿ ಹೇಳಿಕೊಂಡಂತೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಲ್ಲಿಯೂ ಅಲ್ಪಸಂಖ್ಯಾತರಿಗೆ ಅಥವಾ ಮುಸ್ಲಿಮರಿಗೆ ನಿಗದಿತ ಕೋಟಾದ ಬಗ್ಗೆ ಹೇಳಲಾಗಿಲ್ಲ. ಅಲ್ಪಸಂಖ್ಯಾತರಿಗೆ ತಾರತಮ್ಯವಿಲ್ಲದೆ ನ್ಯಾಯಯುತವಾದ ಪಾಲನ್ನು ಖಚಿತಪಡಿಸಲಾಗುವುದು ಎನ್ನುವುದು ಮಾತ್ರ ಅದು ನೀಡಿರುವ ಭರವಸೆಯಾಗಿದೆ. ವಾಸ್ತವದಲ್ಲಿ ಇನ್ನೊಂದು ಪ್ಯಾರಾದಲ್ಲಿ ಬ್ಯಾಂಕುಗಳು ಅಲ್ಪಸಂಖ್ಯಾತರಿಗೆ ಯಾವುದೇ ತಾರತಮ್ಯವಿಲ್ಲದೆ ಸಾಂಸ್ಥಿಕ ಸಾಲಗಳನ್ನು ಒದಗಿಸುವುದನ್ನು ಖಚಿತಪಡಿಸುವುದಾಗಿ ಅದು ಭರವಸೆ ನೀಡಿದೆ. ಇದು ಭಾರತದಲ್ಲಿ ಮುಸ್ಲಿಮರು ಎದುರಿಸುತ್ತಿರುವ ವ್ಯಾಪಕವಾಗಿ ವರದಿಯಾಗಿರುವ ಸಮಸ್ಯೆಯಾಗಿದೆ,ಆದರೆ ಮೋದಿ ಬಹುಶಃ ತನ್ನ ಭವಿಷ್ಯದ ಭಾಷಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ‘ಬ್ಯಾಂಕ್ ಸಾಲಗಳಲ್ಲಿಯೂ ಕೋಟಾ’ದ ಭರವಸೆಯನ್ನು ನೀಡುತ್ತಿದೆ ಎಂದು ಹೇಳಿಕೊಳ್ಳಬಹುದು.

ಅಲ್ಪಸಂಖ್ಯಾತರಿಗೆ ತಾರತಮ್ಯವಿಲ್ಲದೆ ‘ಅವಕಾಶಗಳ ನ್ಯಾಯಯುತ ಪಾಲು’ ಒದಗಿಸುವ ಭರವಸೆಯು ಅವರಿಗಾಗಿ ಕೋಟಾ ನಿಗದಿಗೊಳಿಸಲಾಗುತ್ತದೆ ಎಂಬ ಅರ್ಥವನ್ನು ನೀಡುವುದಿಲ್ಲ. 2006ರಲ್ಲಿ ಸಾಚಾರ್ ಸಮಿತಿಯು ಮನಮೋಹನ ಸಿಂಗ್ ಸರಕಾರಕ್ಕೆ ಸಲ್ಲಿಸಿದ್ದ ವರದಿ ಮತ್ತು ಅಕ್ಟೋಬರ್ 2014ರಲ್ಲಿ ಪ್ರೊ.ಅಮಿತಾಭ್ ಕುಂಡೂ ಅವರು ಮೋದಿ ಸರಕಾರಕ್ಕೆ ಸಲ್ಲಿಸಿದ್ದ ಅನುಸರಣಾ ವರದಿಯಲ್ಲಿ ಉದ್ಯೋಗ,ಶಿಕ್ಷಣ,ವಸತಿ ಮತ್ತು ಹಣಕಾಸು ನೆರವು ಇವುಗಳಲ್ಲಿ ಮುಸ್ಲಿಮರು ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂಬ ವಾಸ್ತವವನ್ನು ಉತ್ತಮವಾಗಿ ದಾಖಲಿಸಲಾಗಿತ್ತು.

ವಾಸ್ತವದಲ್ಲಿ ಕುಂಡೂ ಸಮಿತಿಯು,‘ಸಮಾಜದಲ್ಲಿಯ ವ್ಯಾಪಕ,ವ್ಯವಸ್ಥಿತ ತಾರತಮ್ಯವನ್ನು ತೊಡೆದುಹಾಕಲು ಹಲವಾರು ಸಾಧನಗಳಲ್ಲಿ ಕೋಟಾ ಒಂದು ಮಾತ್ರವಾಗಿದೆ,ಬದಲಿಗೆ ಸರಕಾರವು ಸಾಮಾಜಿಕ ನ್ಯಾಯವನ್ನು ಸಾಧಿಸಲು ವೈವಿಧ್ಯಮಯ ಉತ್ತೇಜನ ಮತ್ತು ತಾರತಮ್ಯ ನಿವಾರಣೆಯತ್ತ ಗಮನವನ್ನು ನೀಡಬೇಕು ಮತ್ತು ಇದಕ್ಕಾಗಿ ಅದು ಮೀಸಲಾತಿಗಳನ್ನು ಮೀರಿ ಮುಂದೆ ಸಾಗಬೇಕು’ ಎಂದು ನಿರ್ದಿಷ್ಟವಾಗಿ ಗಮನಿಸಿತ್ತು.

ಮೋದಿ ಸರಕಾರವು ಕುಂಡೂ ಸಮಿತಿಯ ಶಿಫಾರಸುಗಳಂತೆ ಕಾರ್ಯಾಚರಿಸುವಲ್ಲಿ ಈವರೆಗೂ ವಿಫಲವಾಗಿದೆ.

ಕೃಪೆ: thewire.in

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಸಿದ್ಧಾರ್ಥ್ ವರದರಾಜನ್

contributor

Similar News