ಸರಸ್ವತಿ ಬದಲು ಸಾವಿತ್ರಿಭಾಯಿ ಅವರನ್ನು ವಿದ್ಯಾದೇವಿ ಎಂದ ದಲಿತ ಶಿಕ್ಷಕಿಯ ವಿರುದ್ಧ ಎಫ್‍ಐಆರ್

Update: 2024-01-30 11:16 GMT

Screengrab:X/@TribalArmy

ಬಾರಾ (ರಾಜಸ್ಥಾನ): ನಿಜವಾದ ವಿದ್ಯಾದೇವತೆ ಸರಸ್ವತಿ ಅಲ್ಲ. ಸಾವಿತ್ರಿಭಾಯಿ ಫುಲೆ ಎಂಬ ನಿಲುವನ್ನು ಪ್ರಬಲವಾಗಿ ವ್ಯಕ್ತಪಡಿಸಿದ ಸರ್ಕಾರಿ ಶಾಲೆಯ ದಲಿತ ಶಿಕ್ಷಕಿ ಹೇಮಲತಾ ಬಿರ್ವಾ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಜನವರಿ 26ರ ಗಣರಾಜ್ಯೋತ್ಸವ ದಿನಾಚರಣೆ ವೇಳೆ ರಾಜಸ್ಥಾನದ ನಹರ್‍ಗಡದ ಲಕ್ಡಾಯಿ ಸರ್ಕಾರಿ ಶಾಲೆಯಲ್ಲಿ ಇದನ್ನು ವಿರೋಧಿಸಿದ ಗುಂಪನ್ನು ಧೈರ್ಯವಾಗಿ ಎದುರಿಸಿದ ಶಿಕ್ಷಕಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು.

ಹೇಮಲತಾ ಅವರ ನಿಲುವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿತ್ತು. ಇದಕ್ಕೆ ಬಲಪಂಥೀಯ ಸಂಘಟನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆಪಾದಿಸಿದಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇದೀಗ ಎರಡೂ ಕಡೆಯವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹೇಮಲತಾ ಶಿಕ್ಷಕಿಯಾಗಿದ್ದ ಶಾಲೆಯಲ್ಲಿ ಗಣರಾಜ್ಯೋತ್ಸವದಂದು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಾಬಾಸಾಹೇಬ್ ಬಿ.ಆರ್.ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿ ಚಿತ್ರಗಳನ್ನು ವೇದಿಕೆಯಲ್ಲಿ ಇರಿಸಲಾಗಿತ್ತು. ಮೇಜಿನ ಮೇಳೆ ಸರಸ್ವತಿದೇವತೆಯ ಫೋಟೊ ಇಡುವಂತೆ ಇಬ್ಬರು ಶಿಕ್ಷಕರು ಬಲವಂತಪಡಿಸಿದರು. ಆದರೆ ಇದಕ್ಕೆ ಹೇಮಲತಾ ನಿರಾಕರಿಸಿದರು. ಕೆಲ ಗ್ರಾಮಸ್ಥರನ್ನು ಗುಂಪುಸೇರಿಸಿದ ಶಿಕ್ಷಕರು ಹೇಮಲತಾ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದರು ಎನ್ನಲಾಗಿದೆ.

"ಮಕ್ಕಳ ವಿದ್ಯೆಗೆ ಸರಸ್ವತಿಯ ಕೊಡುಗೆ ಏನು? ಮಕ್ಕಳ ಶಿಕ್ಷಣಕ್ಕೆ ನಿಜವಾಗಿ ಸಾವಿತ್ರಿಭಾಯಿ ಫುಲೆ ದೇವತೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಧಾರ್ಮಿಕ ಕಾರ್ಯಕ್ರಮ ಅಲ್ಲ; ಗಣರಾಜ್ಯೋತ್ಸವ ಸಮಾರಂಭ" ಎಂದು ಹೇಮಲತಾ ಅವರು ಹೇಳಿರುವ ವಿಡಿಯೋ ವೈರಲ್‌ ಆಗಿದೆ. ಈ ಬಗ್ಗೆ ಜಾಲತಾಣಗಳಲ್ಲಿ ವ್ಯಾಪಕ ಪರ ಹಾಗೂ ವಿರೋಧ ಚರ್ಚೆ ನಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News