ಬಿಜೆಪಿಯ ಆಡಳಿತದಲ್ಲಿ ಬಾಲಕಿಯರು, ಮಹಿಳೆಯರು ಸುರಕ್ಷಿತವಾಗಿಲ್ಲ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ
ಭೋಪಾಲ್: ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೀಡಾಗಿ ರಕ್ತಸ್ರಾವಕ್ಕೆ ತುತ್ತಾಗಿದ್ದ 12 ವರ್ಷದ ಸಂತ್ರಸ್ತ ಬಾಲಕಿಯನ್ನು ಉಲ್ಲೇಖಿಸಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, "ಬಿಜೆಪಿಯ ದುರಾಡಳಿತದಲ್ಲಿ ಬಾಲಕಿಯುರು, ಮಹಿಳೆಯರು, ಆದಿವಾಸಿಗಳು ಹಾಗೂ ದಲಿತರು ಸುರಕ್ಷಿತವಾಗಿಲ್ಲ" ಎಂದು ಆರೋಪಿಸಿದ್ದಾರೆ.
ಅತ್ಯಾಚಾರಕ್ಕೀಡಾಗಿ ಉಜ್ಜಯಿನಿ ನಗರದ ಬೀದಿಯಲ್ಲಿ ನೆರವಿಗಾಗಿ ಯಾಚುಸುತ್ತಿದ್ದ ಬಾಲಕಿಗೆ ಬುಧವಾರ ತಜ್ಞರ ತಂಡವೊಂದು ಶಸ್ತ್ರಚಿಕಿತ್ಸೆ ನೆರವೇರಿಸಿದ್ದು, ಆಕೆಯ ಸ್ಥಿತಿಯಿನ್ನೂ ಗಂಭೀರವಾಗಿದ್ದರೂ, ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ ವಾದ್ರಾ, "ಮಹಾಕಾಳ ದೇವರ ನಗರವಾದ ಉಜ್ಜಯಿನಿಯಲ್ಲಿ ಪುಟ್ಟ ಬಾಲಕಿಯ ಮೇಲೆ ನಡೆದಿರುವ ಭೀಕರ ಕೃತ್ಯವು ಮನ ಕಲಕುವಂತಿದೆ. ತನ್ನ ಮೇಲೆ ನಡೆದ ಕಿರುಕುಳದ ನಂತರ ಆ ಬಾಲಕಿಯು ನೆರವಿಗಾಗಿ ಎರಡೂವರೆ ಗಂಟೆ ಕಾಲ ಮನೆ ಮನೆ ಬಾಗಿಲು ಅಲೆದಿದ್ದು, ನಂತರ ರಸ್ತೆಯಲ್ಲಿ ಪ್ರಜ್ಞಾಹೀನಳಾಗಿ ಬಿದ್ದರೂ ಯಾವುದೇ ನೆರವು ದೊರೆತಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
"ಮಧ್ಯಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಮಹಿಳಾ ರಕ್ಷಣೆಯ ಸ್ಥಿತಿ ಈ ರೀತಿಯಲ್ಲಿದೆಯೆ? 20 ವರ್ಷಗಳ ಬಿಜೆಪಿ ದುರಾಡಳಿತದಲ್ಲಿ ಬಾಲಕಿಯರು, ಮಹಿಳೆಯರು, ಆದಿವಾಸಿಗಳು ಹಾಗೂ ದಲಿತರು ಸುರಕ್ಷಿತವಾಗಿಲ್ಲ" ಎಂದು ಅವರು ಕಿಡಿ ಕಾರಿದ್ದಾರೆ.