ಪ್ರಾಚೀನ ಭಾರತೀಯ ಸಮುದಾಯಗಳ ಮೂಲ ಪತ್ತೆ ಹಚ್ಚಲು ಆಧುನಿಕ ಜೆನೊಮಿಕ್ಸ್ ಬಳಸಿ ಸರಕಾರದಿಂದ ಅಧ್ಯಯನ

Update: 2024-10-14 15:18 GMT

PC : indianexpress.com

ಹೊಸದಿಲ್ಲಿ : ಪ್ರಾಚೀನ ಭಾರತೀಯ ಸಮುದಾಯಗಳ ಮೂಲದ ಕುರಿತು ಪರಸ್ಪರ ವಿರೋಧಾಭಾಸದ ಸಿದ್ಧಾಂತಗಳ ನಡುವೆ ದಕ್ಷಿಣ ಏಶ್ಯಾದ ಜನಸಂಖ್ಯಾ ಇತಿಹಾಸವನ್ನು ನಿರ್ಣಾಯಕವಾಗಿ ಕಂಡುಕೊಳ್ಳಲು ಸರಕಾರವು ಇದೇ ಮೊದಲ ಬಾರಿಗೆ ಪ್ರಾಚೀನ ಮತ್ತು ಆಧುನಿಕ ಜಿನೊಮಿಕ್ಸ್ ಅನ್ನು ಬಳಸಿಕೊಂಡು ಸಮಗ್ರ ವೈಜ್ಞಾನಿಕ ಅಧ್ಯಯನವನ್ನು ಕೈಗೊಂಡಿದೆ.

ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಆಂಥ್ರೊಪೊಲಾಜಿಕಲ್ ಸರ್ವೆ ಆಫ್ ಇಂಡಿಯಾ(ಎಎನ್‌ಎಸ್‌ಐ) ಮೂಲಕ ಈ ಅಧ್ಯಯನವನ್ನು ನಡೆಸಲಾಗುತ್ತಿದೆ.

ಯೋಜನೆಯಡಿ ಭಾರತ ಮತ್ತು ಪಾಕಿಸ್ತಾನದ ವಿವಿಧ ಪುರಾತತ್ವ ಸ್ಥಳಗಳಿಂದ ಸಂಗ್ರಹಿಸಲಾದ 300 ಪುರಾತನ ಅಸ್ಥಿಪಂಜರಗಳ ಅವಶೇಷಗಳ, ಪ್ರಮುಖವಾಗಿ ಕಪಾಳದ ಮತ್ತು ಹಲ್ಲು ಸೇರಿದಂತೆ ಇತರ ಮೂಳೆ ತುಣುಕುಗಳ ಅಧ್ಯಯನವನ್ನು ನಡೆಸಲಾಗುವುದು.

ಸ್ವಾತಂತ್ರ್ಯಪೂರ್ವದಲ್ಲಿ ಮತ್ತು ಸ್ವಾತಂತ್ರ್ಯಾನಂತರ ಹರಪ್ಪಾ ಮತ್ತು ಮೊಹೆಂಜೋದಾರೋ(ಈಗ ಪಾಕಿಸ್ತಾನದಲ್ಲಿದೆ), ಬುರ್ಝಹಾಮ್(ಜಮ್ಮು-ಕಾಶ್ಮೀರ), ನಾಗಾರ್ಜುನಕೊಂಡ(ಆಂಧ್ರಪ್ರದೇಶ), ಮಸ್ಕಿ (ಕರ್ನಾಟಕ),ರೋಪಾರ್ (ಪಂಜಾಬ್) ಮತ್ತು ಲೋಥಾಲ್ (ಗುಜರಾತ್)ನಂತಹ ಸಿಂಧು ಕಣಿವೆ ನಾಗರಿಕತೆಯ ಸ್ಥಳಗಳಲ್ಲಿ ನಡೆಸಲಾಗಿದ್ದ ಉತ್ಖನನಗಳ ಸಮಯದಲ್ಲಿ ಸಂಗ್ರಹಿಸಲಾಗಿದ್ದ ಅವಶೇಷಗಳು ಇವುಗಳಲ್ಲಿ ಸೇರಿವೆ.

ಅಸ್ಥಿಪಂಜರಗಳ ಅವಶೇಷಗಳು ಭಾರತೀಯ ಪುರಾತತ್ವ ಸರ್ವೆಯು 1922 ಮತ್ತು 1958ರ ನಡುವೆ ನಡೆಸಿದ್ದ ಉತ್ಖನನಗಳಲ್ಲಿ ಲಭಿಸಿದ್ದು,ಬಳಿಕ ಅವುಗಳನ್ನು ಎಎನ್‌ಎಸ್‌ಐಗೆ ಹಸ್ತಾಂತರಿಸಲಾಗಿತ್ತು ಎಂದು ಎಎನ್‌ಎಸ್‌ಐ ನಿರ್ದೇಶಕ ಬಿ.ವಿ.ಶರ್ಮಾ ಸುದ್ದಿಸಂಸ್ಥೆಗೆ ತಿಳಿಸಿದರು. ಎಎನ್‌ಎಸ್‌ಐ ಇಂತಹ ಅವಶೇಷಗಳನ್ನು ಸಂರಕ್ಷಿಸುವ ಹೊಣೆಯನ್ನು ಹೊಂದಿದೆ.

ಐತಿಹಾಸಿಕ ದೃಷ್ಟಿಕೋನದಿಂದ,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯ ನಿರ್ವಹಿಸುವ ಲಕ್ನೋದ ಬೀರಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪಾಲಿಯೊಸೈನ್ಸಸ್ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳಲಾಗಿರುವ ಅಧ್ಯಯನವು ಈ ಅಸ್ಥಿಪಂಜರ ಅವಶೇಷಗಳಿಂದ ಪಡೆಯಲಾದ ಡಿಎನ್‌ಎ ಅಧ್ಯಯನದ ಮೂಲಕ ಪ್ರಾಚೀನ ಭಾರತೀಯ ಸಮುದಾಯಗಳ ಮೂಲವನ್ನು ಅನ್ವೇಷಿಸುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದರು.

ಅಧ್ಯಯನವು ಪ್ರಾಚೀನ ಆಹಾರಗಳು, ಜೀವನ ಸ್ಥಿತಿಗಳು,ರೋಗಗಳ ಹರಡುವಿಕೆ, ಪರಿಸರಕ್ಕೆ ಹೊಂದಿಕೊಳ್ಳುವಿಕೆ ಮತ್ತು ಜನರ ಚಲನವಲನ/ವಲಸೆಯ ಮಾದರಿ ಮತ್ತು ಕಾಲಕ್ರಮೇಣ ಅವರ ಅಂತರ್‌ಕ್ರಿಯೆಗಳು ಹಾಗೂ ವಂಶವಾಹಿ ಗುಂಪಿನ ಹಂಚಿಕೆಯ ಬಗ್ಗೆ ಸುಳಿವುಗಳನ್ನೂ ಬಹಿರಂಗಗೊಳಿಸಲಿದೆ ಎಂದು ಹೇಳಿದ ಶರ್ಮಾ,ಸರಳವಾಗಿ ಹೇಳುವುದಾದರೆ ಜನರು ಎಲ್ಲಿಂದ ಬಂದಿದ್ದರು,ಹೇಗೆ ವಾಸಿಸುತ್ತಿದ್ದರು ಮತ್ತು ಪರಿಸರ ಬದಲಾವಣೆಯು ಹೇಗೆ ಅವರ ಇತಿಹಾಸ ಮತ್ತು ಪರಂಪರೆಯನ್ನು ರೂಪಿಸಿತ್ತು ಎನ್ನುವುದನ್ನು ತಿಳಿದುಕೊಳ್ಳಲು ಈ ಸಂಶೋಧನೆಯು ನೆರವಾಗಲಿದೆ ಎಂದರು.

19ನೇ ಶತಮಾನದಲ್ಲಿ ಪಾಶ್ಚಾತ್ಯ ವಿದ್ವಾಂಸರು ಆರ್ಯರ ಆಕ್ರಮಣ ಸಿದ್ಧಾಂತವನ್ನು ಪ್ರಸ್ತಾವಿಸಿದ್ದರು. ಈ ಸಿದ್ಧಾಂತದ ಪ್ರಕಾರ ಸಿಂಧು ಕಣಿವೆ ಅವಧಿ(2000-1500 ಕ್ರಿ.ಪೂ.)ಯ ನಂತರ ಮಧ್ಯ ಏಶ್ಯಾದಿಂದ ಭಾರತಕ್ಕೆ ವಲಸೆ ಬಂದಿದ್ದ ಬಿಳಿ ಮೈಬಣ್ಣದ ಕೃಷಿ ಜನರ ಒಂದು ವರ್ಗವು ಉಪಖಂಡವನ್ನು ನಾಗರಿಕಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು.

ಆದರೆ ಭಾರತದಲ್ಲಿಯ ಹಲವಾರು ಆಧುನಿಕ ಪುರಾತತ್ವ ಶಾಸ್ತ್ರಜ್ಞರ ಪ್ರಕಾರ ಆರ್ಯರು ಮುಖ್ಯವಾಗಿ ಸರಸ್ವತಿ ನದಿಯುದ್ದಕ್ಕೂ ವಾಸವಾಗಿದ್ದ ಸ್ಥಳೀಯ ಜನರಾಗಿದ್ದರು. ನದಿಯು ಬತ್ತಿದ ಬಳಿಕ ಅವರು ಭಾರತದೊಳಗೆ ಮತ್ತು ಹೊರಗಿನ ಪ್ರದೇಶಗಳಿಗೆ ವಲಸೆ ಹೋಗಿದ್ದರು ಮತ್ತು ಸಿಂಧು ಕಣಿವೆಯಲ್ಲಿಯೂ ನೆಲೆಸಿದ್ದರು. ಉತ್ತರ ಪ್ರದೇಶದ ಸಿನೌಲಿಯಲ್ಲಿರುವ 4,000 ವರ್ಷಗಳಷ್ಟು ಹಳೆಯದಾದ ಪುರಾತತ್ವ ಶಾಸ್ತ್ರ ಸ್ಥಳದಲ್ಲಿಯ ಇತ್ತೀಚಿನ ಉತ್ಖನನಗಳನ್ನು ಎಎಸ್‌ಐ ಉಲ್ಲೇಖಿಸಿದ್ದು, ಅಲ್ಲಿ ಯೋಧರ ಸಮಾಧಿಗಳ ಕುರುಹುಗಳು, ಸ್ಥಳೀಯ ಸ್ವರೂಪದ ಶಸ್ತ್ರಾಸ್ತ್ರಗಳು ಮತ್ತು ರಥಗಳ ಪುರಾವೆಗಳು ಪತ್ತೆಯಾಗಿದ್ದವು.

ಇತ್ತೀಚಿಗೆ ಈ ಸಂಶೋಧನೆಗಳ ಆಧಾರದಲ್ಲಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು,ಇವು 5,000 ವರ್ಷಗಳ ಭಾರತೀಯ ನಾಗರಿಕತೆಯ ನಿರಂತರತೆಗೆ ಒತ್ತು ನೀಡಿವೆ,ತನ್ಮೂಲಕ ಆರ್ಯರ ವಲಸೆಯ ಕುರಿತು ಶಂಕೆಯನ್ನು ವ್ಯಕ್ತಪಡಿಸಿವೆ.

ಆರ್ಯರು ವಲಸೆ ಬಂದಿದ್ದರೇ ಇಲ್ಲವೇ ಎನ್ನುವುದನ್ನು ನಿರ್ಣಾಯಕವಾಗಿ ಹೇಳಲು ಅಧ್ಯಯನದಿಂದ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News