ಅಶ್ಲೀಲ ಕಂಟೆಂಟ್: 18 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, 19 ವೆಬ್‌ಸೈಟ್‌ಗಳು, 10 ಆ್ಯಪ್‌ಗಳನ್ನು ನಿರ್ಬಂಧಿಸಿದ ಕೇಂದ್ರ
ಹೊಸದಿಲ್ಲಿ: ಅಶ್ಲೀಲ ಮತ್ತು ಲೈಂಗಿಕ ವೀಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ ಬೇಶರಮ್ಸ್, ಹಂಟರ್ಸ್, ಡ್ರೀಮ್ ಫಿಲ್ಮ್ಸ್, ಮೂಡ್‌ಎಕ್ಸ್, ನಿಯಾನ್‌ಎಕ್ಸ್, ಎಕ್ಸ್‌ಟ್ರಾಮೂಡ್ ಸಹಿತ 18 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, 19 ವೆಬ್‌ಸೈಟ್‌ಗಳು, 10 ಆ್ಯಪ್‌ಗಳು ಮತ್ತು 57 ಸಾಮಾಜಿಕ ಜಾಲತಾಣ ಖಾತೆಗಳನ್ನು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ನಿರ್ಬಂಧಿಸಿದೆ.
ಮಹಿಳೆಯರನ್ನು ಅಸಭ್ಯವಾಗಿ ಬಿಂಬಿಸುವುದನ್ನು ನಿಗ್ರಹಿಸುವ ಕಾಯಿದೆ, 1986 ಇದರ ಸೆಕ್ಷನ್ 4 ಅಡಿಯಲ್ಲಿ, ಐಪಿಸಿಯ ಸೆಕ್ಷನ್ 292 ಮತ್ತು ಐಟಿ ಕಾಯಿದೆ 2020 ಇದರ ಸೆಕ್ಷನ್ 67 ಮತ್ತು 67ಎ ಅಡಿಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ.
ನಿರ್ಬಂಧಿತ ಆ್ಯಪ್‌ಗಳ ಪೈಕಿ ಒಂದಕ್ಕೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 1 ಕೋಟಿಗೂ ಅಧಿಕ ಡೌನ್‌ಲೋಡ್‌ಗಳು ಹಾಗೂ ಇನ್ನೆರಡಕ್ಕೆ 50 ಲಕ್ಷಕ್ಕೂ ಅಧಿಕ ಡೌನ್‌ಲೋಡ್‌ಗಳಿದ್ದವು.
ನಿರ್ಬಂಧಿತ 10 ಆ್ಯಪ್‌ಗಳ ಪೈಕಿ ಏಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿದ್ದರೆ ಮೂರು ಆ್ಯಪಲ್ ನ ಆ್ಯಪ್ ಸ್ಟೋರ್‌ನಲ್ಲಿದ್ದವು.
ಒಟ್ಟು 12 ಫೇಸ್ಬುಕ್ ಖಾತೆಗಳು, 17 ಇನ್‌ಸ್ಟಾಗ್ರಾಂ ಖಾತೆಗಳು, 16 ಎಕ್ಸ್ ಖಾತೆಗಳು ಮತ್ತು 12 ಯುಟ್ಯೂಬ್ ಖಾತೆಗಳನ್ನು ನಿರ್ಬಂಧಿಸಲಾಗಿದೆ.