ಗುಜರಾತ್: ಕಾಂಗ್ರೆಸ್ ನಾಯಕರಾದ ಮೊದ್ವಾಡಿಯಾ, ದೆರ್ ಬಿಜೆಪಿ ಸೇರ್ಪಡೆ

Update: 2024-03-05 17:51 GMT

 ಮೊದ್ವಾಡಿಯಾ | Photo: PTI 

ಹೊಸದಿಲ್ಲಿ: ಕಾಂಗ್ರೆಸ್‌ ನ ಗುಜರಾತ್ ಘಟಕದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮೋದ್ವಾಡಿಯಾ ಹಾಗೂ ಪಕ್ಷದ ಮಾಜಿ ಕಾರ್ಯಕಾರಿ ಅಧ್ಯಕ್ಷ ಅಂಬರೀಶ್ ದೆರ್ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ತೊರೆಯುವ ನಿರ್ಧಾರವನ್ನು ಇವರಿಬ್ಬರೂ ಸೋಮವಾರ ಪ್ರಕಟಿಸಿದ್ದರು.

ಗಾಂಧಿನಗರದಲ್ಲಿರುವ ಬಿಜೆಪಿ ಗುಜರಾತ್ ಘಟಕದ ಮುಖ್ಯ ಕಾರ್ಯಾಲಯ ‘ಕಮಲಂ’ನಲ್ಲಿ ನಡೆದ ಸಮಾರಂಭದಲ್ಲಿ ಉಭಯ ನಾಯಕರೂ ಕಮಲಪಕ್ಷಕ್ಕೆ ಸೇರ್ಪಡೆಗೊಂಡರು.

ಬಿಜೆಪಿ ರಾಜ್ಯ ಘಟಕದ ವರಿಷ್ಠ ಸಿ.ಆರ್.ಪಾಟೀಲ್ ಅವರು ಇಬ್ಬರಿಗೂ ಕೇಸರಿ ಟೋಪಿ ಹಾಗೂ ಶಾಲುಗಳನ್ನು ತೊಡಿಸಿ, ಪಕ್ಷಕ್ಕೆ ಬರಮಾಡಿಕೊಂಡರು.

ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯ ಶ್ರೀರಾಮಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ಬಹಿಷ್ಕರಿಸುವ ಕಾಂಗ್ರೆಸ್‌ ನ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿ ಉಭಯ ನಾಯಕರು ರಾಜೀನಾಮೆ ನೀಡುವ ನಿರ್ಧಾರವನ್ನು ಸೋಮವಾರ ಪ್ರಕಟಿಸಿದ್ದರು.

ಅಂಬರೀಶ್‌ ದೆರ್ ಹಾಗೂ ಮೋದ್ವಾಡಿಯಾ ಅವರು ಕಾಂಗ್ರೆಸ್ ತೊರೆಯುವ ಮೊದಲು ಆ ಪಕ್ಷದ ರಾಜ್ಯಸಭಾ ಸದಸ್ಯ ಹಾಗೂ ಮಾಜಿ ಕೇಂದ್ರ ಸಚಿವ ನರನ್ ರಥವಾ ಅವರು ತನ್ನ ಪುತ್ರ ಮತ್ತು ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಪೋರ್ಬಂದರ್ ಕ್ಷೇತ್ರದ ಶಾಸಕರಾದ ಮೋದ್ವಾಡಿಯಾ ಅವರು ವಿಧಾನಸಭಾ ಸದಸ್ಯತ್ವಕ್ಕೆ ತನ್ನ ರಾಜೀನಾಮೆ ಪತ್ರವನ್ನು ಗುಜರಾತ್ ಅಸೆಂಬ್ಲಿ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಸಲ್ಲಿಸಿದರು.

ಗುಜರಾತಿನ ಅತ್ಯಂತ ಹಿರಿಯ ಹಾಗೂ ಪ್ರತಿಪಕ್ಷ ನಾಯಕರಲ್ಲೊಬ್ಬರಾದ 67 ವರ್ಷ ವಯಸ್ಸಿನ  ಮೋದ್ವಾಡಿಯಾ ಅವರು 40 ವರ್ಷಗಳಿಂದ ಕಾಂಗ್ರೆಸ್ ಜೊತೆ ನಂಟು ಹೊಂದಿದ್ದರು. ಮೋದ್ವಾಡಿಯಾ ಅವರ ರಾಜೀನಾಮೆಯೊಂದಿಗೆ 182 ಸದಸ್ಯರ ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್‌ ನ ಬಲ 14ಕ್ಕಿಳಿದಿದೆ.

46 ವರ್ಷ ವಯಸ್ಸಿನ ಅಂಬರೀಶ್‌ ದೆರ್‌ ಅವರು 2017ರಿಂದ 2022ರವರೆಗೆ ಅಮ್ರೇಲಿ ಜಿಲ್ಲೆಯ ರಾಜುಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News