ದ್ವೇಷ ಭಾಷಣ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅದನ್ನು ತಡೆಯಬೇಕು: ಸುಪ್ರೀಂ ಕೋರ್ಟ್‌

Update: 2023-08-11 16:46 GMT

ಹೊಸದಿಲ್ಲಿ: ದ್ವೇಷ ಭಾಷಣ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಇಂದು ಆದೇಶ ನೀಡಿದೆ.

ಹರಿಯಾಣದಲ್ಲಿ ಕಳೆದ ವಾರ ನಡೆದ ಕೋಮು ಘರ್ಷಣೆಯಲ್ಲಿ ಆರು ಮಂದಿ ಸಾವನ್ನಪ್ಪಿರುವ ಘಟನೆ ಸೇರಿದಂತೆ ದೇಶಾದ್ಯಂತ ನಡೆದ ರ್ಯಾಲಿಗಳಲ್ಲಿ ಒಂದು ಸಮುದಾಯದ ಜನರನ್ನು ಕೊಲ್ಲಲು ಮತ್ತು ಅವರಿಗೆ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡುವ ದ್ವೇಷದ ಭಾಷಣಗಳನ್ನು ಹತ್ತಿಕ್ಕಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಪತ್ರಕರ್ತ ಶಹೀನ್ ಅಬ್ದುಲ್ಲಾ ಅವರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಮಾಡುತ್ತಿದೆ.

ವಿಚಾರಣೆ ವೇಳೆ, ಸಮುದಾಯಗಳ ನಡುವೆ ಸಾಮರಸ್ಯ ಮತ್ತು ಸೌಹಾರ್ದ ಇರಬೇಕು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ಹೇಳಿದೆ.

"ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಾಮರಸ್ಯ ಇರಬೇಕು. ದ್ವೇಷದ ಭಾಷಣದ ಸಮಸ್ಯೆ ಒಳ್ಳೆಯದಲ್ಲ. ಅದನ್ನು ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಅದನ್ನು ತಡೆಯಬೇಕು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಆಗಸ್ಟ್ 18ರೊಳಗೆ ಸಮಿತಿಯ ಕುರಿತು ಸೂಚನೆಗಳನ್ನು ಪಡೆದು ಉತ್ತರ ನೀಡುವಂತೆ ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರಿಗೆ ನ್ಯಾಯಾಲಯ ತಿಳಿಸಿದೆ.

ವೀಡಿಯೋ ಸೇರಿದಂತೆ ಎಲ್ಲ ವಿಷಯಗಳನ್ನು ಕ್ರೋಡೀಕರಿಸಿ ನೋಡಲ್ ಅಧಿಕಾರಿಗಳಿಗೆ ನೀಡುವಂತೆ ಅರ್ಜಿದಾರರಿಗೆ ಪೀಠ ಹೇಳಿದೆ.

ವಿವಿಧ ಪ್ರದೇಶಗಳಲ್ಲಿನ ಪೊಲೀಸ್ ಠಾಣೆಗಳಿಗೆ ಬಂದಿರುವ ದ್ವೇಷದ ಮಾತುಗಳ ದೂರುಗಳನ್ನು ಪರಿಶೀಲಿಸುವ ಸಮಿತಿಯನ್ನು ರಚಿಸುವಂತೆ ಪೊಲೀಸ್ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್ ಹೇಳಲಿದೆ ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.

ಮುಂದಿನ ವಿಚಾರಣೆ ಆಗಸ್ಟ್ 18ಕ್ಕೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News