ಮಣಿಪುರ ಮಹಿಳೆಯರ ನಗ್ನ ಮೆರವಣಿಗೆ ಮಾಡಿದ ಆರೋಪಿಯ ಮನೆಗೆ ಬೆಂಕಿ ಹಚ್ಚಿದ ಗುಂಪು

Update: 2023-07-22 05:13 GMT

Photo: indiatoday.in

ಇಂಫಾಲ: ಮಣಿಪುರದಲ್ಲಿ ಗುಂಪೊಂದು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿದ ವಿಡಿಯೊ ವೈರಲ್ ಆದ ಎರಡು ದಿನಗಳ ನಂತರ ಆ ಕೃತ್ಯದಲ್ಲಿ ಭಾಗಿಯಾಗಿದ್ದ ಮುಖ್ಯ ಆರೋಪಿ ಹ್ಯೂರೆಮ್ ಹೇರೋದಾಸ್ ಮೈಯ್ಟಿಯ ಮನೆಗೆ ಗುರುವಾರ ಗುಂಪೊಂದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ ಎಂದು indiatoday.in ವರದಿ ಮಾಡಿದೆ.

ಪ್ರತಿಭಟನಾಕಾರರ ಗುಂಪು, ವಿಶೇಷವಾಗಿ ಮಹಿಳೆಯರನ್ನೇ ಹೊಂದಿದ್ದ ಗುಂಪು ಆರೋಪಿಯ ಮನೆಗೆ ಬೆಂಕಿ ಹಚ್ಚುತ್ತಿರುವುದು ಘಟನೆಯ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

ಇದಕ್ಕೂ ಮುನ್ನ ವೈರಲ್ ಆಗಿದ್ದ ವಿಡಿಯೊವು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಘರ್ಷಕ್ಕಿಳಿದಿರುವ ಎರಡು ಸಮುದಾಯಗಳ ಪೈಕಿ ಒಂದು ಸಮುದಾಯಕ್ಕೆ ಸೇರಿದ್ದ ಮಹಿಳೆಯರನ್ನು ಗುಂಪೊಂದು ರಸ್ತೆ ಬದಿಯಲ್ಲಿ ನಗ್ನ ಮೆರವಣಿಗೆ ನಡೆಸಿರುವುದನ್ನು ತೋರಿಸಿತ್ತು.

ಮೇ 3ರಂದು ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದ ಮರು ದಿನ ಕಾಂಗ್‌ಪೋಕ್ಪಿ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಘಟನೆ ಜರುಗಿತ್ತು. ಆದರೆ, ಈ ಭಯಾನಕ ವಿಡಿಯೊ ಬುಧವಾರವಷ್ಟೇ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿದ್ದು, ಈ ವಿಡಿಯೊ ವಿರುದ್ಧದ ಅಂತರ್ಜಾಲ ನಿಷೇಧ ತೆರವುಗೊಂಡ ನಂತರ ವೈರಲ್ ಆಗಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆಯೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.

ಈ ವಿಡಿಯೊವನ್ನು ಆಧರಿಸಿ ಮಣಿಪುರ ಪೊಲೀಸರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಥೌಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಯ ಆರೋಪಗಳಡಿ ಬುಧವಾರ ರಾತ್ರಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಸಂಬಂಧ ಈವರೆಗೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News