ಪಂಚಾಯ್ತಿ ಪರಿಹರಿಸಲಾಗದ ಸಮಸ್ಯೆ ಬಗೆಹರಿಸಿದ ಕೋಣ!

Update: 2024-07-06 17:01 GMT

ಸಾಂದರ್ಭಿಕ ಚಿತ್ರ

ಪ್ರತಾಪ್‍ಗಢ (ಉತ್ತರಪ್ರದೇಶ): ಮಾಲಕನ ಮನೆಯಿಂದ ಕಾಣೆಯಾದ ಕೋಣವೊಂದರ ಮಾಲಕತ್ವವನ್ನು ನಿರ್ಧರಿಸಲು ಉತ್ತರ ಪೊಲೀಸರು ವಿನೂತನ ಮಾರ್ಗವೊಂದನ್ನು ಕಂಡುಹಿಡಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.

ಈ ಸಮಸ್ಯೆಯನ್ನು ಬಗೆಹರಿಸಲು ಪಂಚಾಯ್ತಿ ವಿಫಲವಾಗಿತ್ತು. ಆಗ ಪೊಲೀಸರು ಈ ಕೋಣವನ್ನು ಬೀದಿಯಲ್ಲಿ ಬಿಟ್ಟುಬಿಟ್ಟರು. ಕೋಣ ಕೆಲ ಸಮಯದ ಬಳಿಕ ತಮ್ಮ ಮಾಲಕನ ಮನೆಯತ್ತ ನಡೆಯುವ ಮೂಲಕ ಸಮಸ್ಯೆ ಬಗೆಹರಿಯಿತು.

ಜಿಲ್ಲೆಯ ಮಹೇಶ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ ಅಸ್ಕರಣಪುರ ಗ್ರಾಮದ ನಂದಾಲಾಲ್ ಸರೋಜ್ ಎಂಬವರ ಕೋಣ ಕೆಲ ದಿನಗಳ ಹಿಂದೆ ನಾಪತ್ತೆಯಾಯಿತು. ಅದನ್ನು ಪುರಯ್ ಹರಿಕೇಶ್ ಗ್ರಾಮದ ಹನುಮಾನ್ ಸರೋಜ್ ಎಂಬವರು ಹಿಡಿದಿಟ್ಟುಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

ನಂದಾಲಾಲ್ ತೀವ್ರ ಹುಡುಕಾಟದ ನಡೆಸಿದ ಬಳಿಕ ಕೋಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದನ್ನು ಹಿಂದಿರುಗಿಸಲು ಹನುಮಾನ್ ನಿರಾಕರಿಸಿದ್ದಕ್ಕೆ ನಂದಾಲಾಲ್ ಮಹೇಶ್‍ಗಂಜ್ ಠಾಣೆಗೆ ಹನುಮಾನ್ ವಿರುದ್ಧ ದೂರು ನೀಡಿದ್ದಾರೆ.

ಪೊಲೀಸರು ಇಬ್ಬರನ್ನೂ ಕರೆಸಿ ಪಂಚಾಯ್ತಿ ನಡೆಸಿದರು. ಆದರೆ ಇಬ್ಬರೂ ಆ ಕೋಣ ತಮಗೆ ಸೇರಿದ್ದು ಎಂದು ಪ್ರತಿಪಾದಿಸಿದ್ದರಿಂದ ಪಂಚಾಯ್ತಿ ವಿಫಲವಾಯಿತು. ಆಗ ಕೋಣನ ನಿಜ ಮಾಲೀಕನ ಪತ್ತೆಗೆ ಠಾಣಾಧಿಕಾರಿ ಶ್ರವಣ್ ಕುಮಾರ್ ಸಿಂಗ್ ವಿನೂತನ ವಿಧಾನ ಕಂಡುಕೊಂಡರು.

ಮಾಲಕನ ನಿರ್ಧಾರವನ್ನು ಕೋಣಕ್ಕೇ ಬಿಟ್ಟುಬಿಡುವುದಾಗಿ ಸಿಂಗ್ ಘೋಷಿಸಿದರು. ಕೋಣವನ್ನು ರಸ್ತೆಯಲ್ಲಿ ಬಿಟ್ಟುಬಿಡಲಾಯಿತು. ಅದು ತನ್ನ ನಿಜ ಮಾಲಕನನ್ನು ಅನುಸರಿಸಲಿ ಎಂದು ಹೇಳಿದ್ದು, ಗ್ರಾಮಸ್ಥರು ಈ ನಿರ್ಧಾರಕ್ಕೆ ಸಮ್ಮತಿಸಿದರು.

ಹನುಮಾನ್ ಹಾಗೂ ನಂದಾಲಾಲ್ ಇಬ್ಬರೂ ತಮ್ಮ ಗ್ರಾಮಕ್ಕೆ ಹೋಗುವ ಮಾರ್ಗಾಭಿಮುಖವಾಗಿ ನಿಂತರು. ಬಳಿಕ ಪೊಲೀಸರು ಕೋಣವನ್ನು ಬಿಟ್ಟಾಗ ಅದು ನಂದಾಲಾಲ್ ಅವರನ್ನು ಅನುಸರಿಸಿ ರಾಯ್ ಅಸ್ಕರಣ್‍ಪುರಕ್ಕೆ ತೆರಳಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News