ಹೈದರಾಬಾದ್: ಮತದಾರರ ಪಟ್ಟಿಯಿಂದ 5.41 ಲಕ್ಷ ಮತದಾರರನ್ನು ಕಿತ್ತುಹಾಕಿದ ಚುನಾವಣಾ ಆಯೋಗ

Update: 2024-04-19 02:24 GMT

ಹೈದರಾಬಾದ್: ಹೈದರಾಬಾದ್ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮೃತಪಟ್ಟವರು, ಸ್ಥಳಾಂತರಗೊಂಡವರು, ಎರಡು ಕಡೆಗಳಲ್ಲಿ ನೋಂದಣಿಗೊಂಡವರು ಸೇರಿದಂತೆ 5.41 ಲಕ್ಷ ಮಂದಿಯ ಹೆಸರನ್ನು ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕಿತ್ತುಹಾಕಿದೆ.

ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳು ಮತ್ತು ಹೈದರಾಬಾದ್ ನಲ್ಲಿ ನಾಲ್ಕನೇ ಹಂತದಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಇಲ್ಲಿ ಬಿಜೆಪಿಯ ಮಾಧ್ವಿ ಲತಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ನಡುವಿನ ಕುತೂಹಲಕಾರಿ ಕದನ ಏರ್ಪಟ್ಟಿದೆ.

ಮತದಾರರ ಪಟ್ಟಿಯ ಶುದ್ಧತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮತ್ತು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಕಠಿಣವಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಹೇಳಿದ್ದಾರೆ. ಮತಗಟ್ಟೆ ಕೇಂದ್ರಗಳು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮಾತ್ರವಲ್ಲದೇ, ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

2023ರ ಜನವರಿಯಿಂದೀಚೆಗೆ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 47,141 ಮೃತಮತದಾರರು, 4,39,801 ಮಂದಿ ಸ್ಥಳಾಂತರಗೊಂಡ ಮತದಾರರು ಮತ್ತು 54,259 ಮಂದಿ ಎರಡು ಕಡೆಗಳಲ್ಲಿ ನೋಂದಾಯಿಸಿದ ಮತದಾರರು ಇದ್ದು, ಇವರನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ ಎಂದು ವಿವರಿಸಿದ್ದಾರೆ.

ಭಾರತದ ಚುನಾವಣಾ ಆಯೋಗದ ಸೂಚನೆಯಂತೆ 5,41,201 ಮತದಾರರನ್ನು ಕಿತ್ತುಹಾಕಲಾಗಿದೆ. ಸೂಕ್ತ ವಿಧಿವಿಧಾನವನ್ನು ಅನುಸರಿಸಿಯೇ ಈ ಹೆಸರುಗಳನ್ನು ಕಿತ್ತುಹಾಕಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News