6 ತಿಂಗಳುಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದೇನೆ; ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಬಿಜೆಪಿ ಸಂಸದ ಸುಶೀಲ್ ಮೋದಿ
ಹೊಸದಿಲ್ಲಿ: ಬಿಜೆಪಿ ಸಂಸದ ಸುಶೀಲ್ ಮೋದಿ ತಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಇಂದು ಘೋಷಿಸಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿದ ಅವರು ತಾವು ಕಳೆದ ಆರು ತಿಂಗಳುಗಳಿಂದ ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುತ್ತಿರುವುದಾಗಿ ತಿಳಿಸಿದರು.
ತನ್ನ ಆರೋಗ್ಯ ಸ್ಥಿತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ತಾವು ತಿಳಿಸಿದ್ದಾಗಿ 72 ವರ್ಷದ ಸುಶೀಲ್ ಮೋದಿ ಹೇಳಿದರು.
ತನ್ನ ಕಾಯಿಲೆಯ ಬಗ್ಗೆ ಜನರಿಗೆ ತಿಳಿಸುವ ಸಮಯ ಬಂದಿದೆ ಎಂದು ತಿಳಿದು ಮಾಹಿತಿ ನೀಡಿರುವುದಾಗಿ ಸುಶೀಲ್ ಮೋದಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ತಾವು ತಮ್ಮ ದೇಶ, ರಾಜ್ಯವಾದ ಬಿಹಾರ ಮತ್ತು ಬಿಜೆಪಿಯ ಸೇವೆಗೆ ಕಟಿಬದ್ಧರಾಗಿರುವುದಾಗಿ ಸುಶೀಲ್ ಮೋದಿ ತಿಳಿಸಿದರು.
ಸುಶೀಲ್ ಮೋದಿ ಅವರು ಜುಲೈ 2017ರಿಂದ ನವೆಂಬರ್ 2020ರ ತನಕ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 2020 ರಲ್ಲಿ ಅವರು ಬಿಹಾರದಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿ ಲೋಕ್ ಜನಶಕ್ತಿ ಪಾರ್ಟಿಯ ಮುಖ್ಯಸ್ಥ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ತೆರವಾದ ಸ್ಥಾನವನ್ನು ತುಂಬಿದ್ದರು.