ಭಾರತ-ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ಮೊದಲು ತಂದೆ, ಈಗ ಮಗ..
ಹೊಸದಿಲ್ಲಿ: ಖಾಲಿಸ್ತಾನಿ ನಾಯಕ ಹರ್ಪ್ರೀತ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ತೀವ್ರ ಸ್ವರೂಪದಲ್ಲಿ ಬಿಗಡಾಯಿಸಿದೆ. ಆದರೆ, ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಕೆನಡಾ ಅಧ್ಯಕ್ಷ ಜಸ್ಟಿನ್ ಟ್ರೂಡೊ ಅವಧಿಯಲ್ಲಿ ಮಾತ್ರ ಬಿಗಡಾಯಿಸುತ್ತಿರುವುದಲ್ಲ. ಬದಲಿಗೆ ಅವರ ತಂದೆ ಪಿಯರ್ ಎಲಿಯಟ್ ಟ್ರೂಡೊ ಅಧ್ಯಕ್ಷರಾಗಿದ್ದಾಗಲೂ ಇಂತಹುದೇ ಪರಿಸ್ಥಿತಿಯಿತ್ತು ಎಂದು indiatoday.in ವರದಿ ಮಾಡಿದೆ.
ಜಸ್ಟಿನ್ ಟ್ರೂಡೊ 2018 ಹಾಗೂ 2023ರ ಶೃಂಗಸಭೆಗಾಗಿ ಭಾರತಕ್ಕೆ ನೀಡುವುದಕ್ಕೂ ಮುನ್ನ ಅವರ ತಂದೆ ಕೂಡಾ ಭಾರತಕ್ಕೆ ಭೇಟಿ ನೀಡಿದ್ದರು ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. 1971ರ ಜನವರಿಯಲ್ಲಿ ಕೆನಡಾದ 15ನೇ ಅಧ್ಯಕ್ಷರಾಗಿದ್ದ ಪಿಯರ್ ಟ್ರೂಡೊ ಭಾರತಕ್ಕೆ ಐದು ದಿನಗಳ ಭೇಟಿ ನೀಡಿದ್ದರು. ಅವರು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಂಟೆ ಹಾಗೂ ಎತ್ತಿನ ಬಂಡಿ ಸವಾರಿ ಮಾಡಿದ್ದರು. ಗಂಗಾ ನದಿ ಬಳಿಯಿರುವ ಲೋಕೊಮೋಟಿವ್ ಕಾರ್ಖಾನೆಗೆ ಭೇಟಿ ನೀಡಿದ್ದ ಅವರು, ನಂತರ ತಾಜ್ ಮಹಲ್ ಅನ್ನು ಕಣ್ತುಂಬಿಕೊಂಡಿದ್ದರು ಎಂದು ಪಿಯರ್ ಟ್ರೂಡೊರ ದಿಲ್ಲಿ ಭೇಟಿಯ ಸಂದರ್ಭದಲ್ಲಿ ಕೆನಡಾ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದ ಗಾರ್ ಪಾರ್ಡಿ ಸ್ಮರಿಸಿಕೊಂಡಿದ್ದಾರೆ.
ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಹಳಸಿದ್ದೆ ಪಿಯರ್ ಟ್ರೂಡೊ ಅವಧಿಯಲ್ಲಿ ಎಂದು ಹೇಳಲಾಗಿದೆ.
ಆದರೆ, ಭಾರತ-ಕೆನಡಾ ಸಂಬಂಧ ಹಳಸಲು ಕೇವಲ ಖಾಲಿಸ್ತಾನಿಗಳ ಸಮಸ್ಯೆ ಮಾತ್ರ ಕಾರಣವಾಗಿರಲಿಲ್ಲ. ಬದಲಿಗೆ, ಶಾಂತಿಯ ಉದ್ದೇಶಕ್ಕಾಗಿ ಭಾರತವು ಅಣುಬಾಂಬ್ ಪರೀಕ್ಷೆ ನಡೆಸಿದ್ದರಿಂದಲೂ ಉಭಯ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿತ್ತು. ಆದರೆ, ಫೋಖ್ರಾನ್ ಅಣು ಬಾಂಬ್ ಪರೀಕ್ಷೆಯಿಂದಷ್ಟೇ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಹಳಸಿರಲಿಲ್ಲ. ಬದಲಿಗೆ ಕೆನಡಾದಲ್ಲಿನ ಖಾಲಿಸ್ತಾನಿ ಉಗ್ರರ ಮೇಲೆ ಕ್ರಮ ಕೈಗೊಳ್ಳಲು ಪಿಯರ್ ಟ್ರೂಡೊ ನಿರಾಕರಿಸಿದ್ದರಿಂದಲೂ ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವಾಗಿತ್ತು.
1980ರಲ್ಲಿ ಪಂಜಾಬ್ ನ ಉಗ್ರವಾದಿಗಳ ಮೇಲೆ ದಾಳಿ ನಡೆದ ನಂತರ, ಪಂಜಾಬ್ ನ ಉಗ್ರವಾದಿಗಳು ಕೆನಡಾದಲ್ಲಿ ಆಶ್ರಯ ಪಡೆದಿದ್ದರು. ಇಂತಹ ಓರ್ವ ಉಗ್ರವಾದಿ ತಲ್ವಿಂದರ್ ಸಿಂಗ್ ಪಾರ್ಮರ್. 1981ರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದ ನಂತರ, ಆತ ಕೆನಡಾಗೆ ಪರಾರಿಯಾಗಿದ್ದ.
ವಿದೇಶಗಳಲ್ಲಿರುವ ಭಾರತೀಯ ಸಂಸ್ಥೆಗಳ ಮೇಲೆ ದಾಳಿ ನಡೆಸುವಂತೆ ಹಾಗೂ ಕೋಮು ಹತ್ಯೆಗಳನ್ನು ನಡೆಸುವಂತೆ ಖಾಲಿಸ್ತಾನಿ ಘಟಕವಾದ ಬಬ್ಬರ್ ಖಾಲ್ಸಾದ ಸದಸ್ಯನಾದ ಪಾರ್ಮರ್ ಕರೆ ನೀಡಿದ್ದ. ಉಗ್ರವಾದಿ ಪಾರ್ಮರ್ ಅನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತವು ಮನವಿ ಮಾಡಿತ್ತಾದರೂ, ಪಿಯರ್ ಟ್ರೂಡೊ ನೇತೃತ್ವದ ಸರ್ಕಾರವು ಈ ಮನವಿಯನ್ನು ತಳ್ಳಿ ಹಾಕಿತ್ತು. ಇದಲ್ಲದೆ, ಭಾರತದಿಂದ ರವಾನೆಯಾಗಿದ್ದ ಗುಪ್ತಚರ ಎಚ್ಚರಿಕೆಗಳಿಗೆ ಕಿಂಚಿತ್ತೂ ಕಿವಿಗೊಟ್ಟಿರಲಿಲ್ಲ.
ಜೂನ್ 1, 1985ರಲ್ಲಿ ಭಾರತದ ಗುಪ್ತಚರ ಸಂಸ್ಥೆಗಳು ಕೆನಡಾ ಪ್ರಾಧಿಕಾರಗಳಿಗೆ ಖಲಿಸ್ತಾನ ಉಗ್ರವಾದಿಗಳು ನಡೆಸಬಹುದಾದ ವಿಮಾನ ದಾಳಿಯ ವಿರುದ್ಧ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ತುರ್ತು ಸಂದೇಶವನ್ನು ರವಾನಿಸಿದ್ದವು.
ಇದಾದ ನಂತರ, ಜೂನ್ 23, 1985ರಲ್ಲಿ ಏರ್ ಇಂಡಿಯಾ ವಿಮಾನ ಸಂಖ್ಯೆ 182(ಕಾನಿಷ್ಕಾ)ಯಲ್ಲಿ ಸೂಟ್ ಕೇಸ್ ಬಾಂಬ್ ಇರಿಸಲಾಗಿತ್ತು. ಟೊರೊಂಟೊದಿಂದ ಬ್ರಿಟನ್ ನ ಲಂಡನ್ ಗೆ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ ಒಟ್ಟು 329 ಪ್ರಯಾಣಿಕರಿದ್ದರು. ಹತ್ಯೆಗೀಡಾಗಿದ್ದ ಬಹುತೇಕ ಪ್ರಯಾಣಿಕರು ಕೆನಡಾ ಪ್ರಜೆಗಳಾಗಿದ್ದರು. ಕಾನಿಷ್ಕಾ ಬಾಂಬ್ ದಾಳಿಯು ಕೆನಡಾದ ಇತಿಹಾಸದಲ್ಲಿ ನಡೆದ ಅತ್ಯಂತ ಭಯಾನಕ ಭಯೋತ್ಪಾದಕ ದಾಳಿ ಎಂದು ದಾಖಲಾಗಿದೆ.
ಪಿಯರ್ ಟ್ರೂಡೊ ರಕ್ಷಣೆ ನೀಡಿದ್ದ ಪಾರ್ಮರ್ ಕಾನಿಷ್ಕಾ ದಾಳಿಯ ಸೂತ್ರಧಾರನಾಗಿದ್ದ. 1992ರಲ್ಲಿ ಪಂಜಾಬ್ ನಲ್ಲಿ ಆತನನ್ನು ಪೊಲೀಸರು ಹತ್ಯೆಗೈದಿದ್ದರು. ಅದೇ ವರ್ಷದ ಜೂನ್ ತಿಂಗಳಲ್ಲಿ ಕೆನಡಾದ ಹಲವಾರು ಭಾಗಗಳಲ್ಲಿ ಪಾರ್ಮರ್ ಗೆ ಗೌರವ ಸೂಚಿಸುವ ಹಲವಾರು ಭಿತ್ತಿ ಚಿತ್ರಗಳು ಕಾಣಿಸಿಕೊಂಡಿದ್ದವು.
ಕಾನಿಷ್ಕಾ ಬಾಂಬ್ ದಾಳಿಯಲ್ಲಿ ಆರೋಪಿಗಳಾಗಿದ್ದ ತಲ್ವಿಂದರ್ ಸಿಂಗ್ ಪಾರ್ಮರ್ ಸೇರಿದಂತೆ ಎಲ್ಲರನ್ನೂ ಬಂಧಿಸಲಾಯಿತಾದರೂ, ಅವರ ಪೈಕಿ ಓರ್ವ ಮಾತ್ರ ದೋಷಿಯೆಂದು ಸಾಬೀತಾದ. ನ್ಯಾಯಾಲಯದಿಂದ ದೋಷಿಯೆಂದು ಸಾಬೀತಾಗಿದ್ದ ಇಂದರ್ ಜಿತ್ ಸಿಂಗ್ ರೆಯಾತ್ ಗೆ 15 ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿತ್ತು. “ಈ ಬಾಂಬ್ ದಾಳಿ ಕುರಿತು ಕೆನಡಾ ಸರ್ಕಾರದ ಅಸಮರ್ಪಕ ಹಾಗೂ ಅಸಮರ್ಥ ಪ್ರತಿಕ್ರಿಯೆಯು ಎಂದಿಗೂ ಭಾರತದ ನಿರೀಕ್ಷೆಗೆ ತಕ್ಕನಾಗಿರಲಿಲ್ಲ” ಎಂದು ಪಾರ್ಡಿ ಬರೆದಿದ್ದಾರೆ.
ಈಗ ಜಸ್ಟಿನ್ ಟ್ರೂಡೊರ ಖಾಲಿಸ್ತಾನಿಗಳ ಕುರಿತ ನೀತಿಗಳೂ ಅವರ ತಂದೆಯ ನೀತಿಗಳನ್ನೇ ಪ್ರತಿಫಲಿಸುತ್ತಿವೆ. ಟ್ರೂಡೊ ಜೂನಿಯರ್ ಅವರಿಗೆ ರಾಜಕೀಯ ಒತ್ತಡಗಳೂ ಇವೆ. ಅವರ ಸರ್ಕಾರವು ಜಗ್ಮೀತ್ ಸಿಂಗ್ ನೇತೃತ್ವದ ನ್ಯೂ ಡೆಮಾಕ್ರಟಿಕ್ ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ.
“ತಮ್ಮ ತಂದೆಗಿದ್ದ ರಾಜಕೀಯ ಗ್ರಹಿಕೆಯ ಕೊರತೆ ಜಸ್ಟಿನ್ ಟ್ರೂಡೊ ಅವರಿಗಿದೆ. ಟ್ರೂಡೊ ಸೀನಿಯರ್ ವಕೀಲರೂ, ಸಾಂವಿಧಾನಿಕ ಪಂಡಿತರೂ ಹಾಗೂ ಹೋರಾಟಗಾರರೂ ಆಗಿದ್ದರು. ಅವರಿಬ್ಬರ ನಡುವೆ ಯಾವುದೇ ಹೋಲಿಕೆ ಇಲ್ಲ. ಜಸ್ಟಿನ್ ಟ್ರೂಡೊ ತಮ್ಮ ರಾಜಕೀಯ ಅಸ್ಮಿತೆ ಬಗ್ಗೆ ಹೆಚ್ಚು ಕಳವಳಗೊಂಡಿದ್ದಾರೆ. ಭಿನ್ನ ಉಪಚಾರವನ್ನು ಬಯಸುವ ಯಾವುದೇ ಸಣ್ಣ ಗುಂಪಿನೊಂದಿಗೂ ಅವರಿಗೆ ಸಂಪರ್ಕ ಬೆಳೆಸುವುದು ಸುಲಭವಾಗಿದೆ” ಎಂದು ಕೆನಡಾದ ಮಾಜಿ ಸಚಿವ ಉಜ್ಜಲ್ ದೊಸಾಂಜ್ indiatoday.in ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
1974ರಲ್ಲಿ ಮೂರು ವರ್ಷಗಳ ನಂತರ ಪಿಯರ್ ಟ್ರೂಡೊ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತವು ಪ್ಲುಟೋನಿಯಂನಿಂದ ತಯಾರಿಸಲಾದ ಅಣ್ವಸ್ತ್ರವನ್ನು ಪೋಖ್ರಾನ್ ಪರೀಕ್ಷಾ ತಾಣದಲ್ಲಿ ಅವರಿಗೆ ಉಡುಗೊರೆ ನೀಡಿತ್ತು ಎಂದು ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾಲಯದ ಸಂಶೋಧನಾ ಪ್ರಬಂಧದಲ್ಲಿ ಹೇಳಲಾಗಿದೆ.
ಇದಾದ ನಂತರ ಮತ್ತೆ ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಸಂಬಂಧ ಕಹಿಯಾಗಿತ್ತಾದರೂ, 2010ರಲ್ಲಿ ಕೆನಡಾದಲ್ಲಿ ಆಯೋಜಿಸಲಾಗಿದ್ದ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಆಗಿನ ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಕೆನಡಾಗೆ ತೆರಳಿದ್ದಾಗ, ಉಭಯ ದೇಶಗಳ ನಡುವೆ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ಆದರೆ, ಖಾಲಿಸ್ತಾನಿ ಉಗ್ರರ ಪರವಾಗಿ ಕೆನಡಾ ಸಹಾನುಭೂತಿ ತೆರೆಮರೆಯಲ್ಲಿ ಮುಂದುವರಿದಿರುವುದರಿಂದ ಭಾರತಕ್ಕೆ ಮತ್ತೆ ಖಾಲಿಸ್ತಾನಿಗಳಿಂದ ಭದ್ರತಾ ಅಪಾಯ ಎದುರಾಗಿದೆ. ಭಾರತವೆಂದೂ ಏರ್ ಇಂಡಿಯಾ ಕಾನಿಷ್ಕಾ ಬಾಂಬ್ ದಾಳಿಯನ್ನು ಮರೆಯಲು ಸಾಧ್ಯವೇ ಇಲ್ಲ.
“ಇಂದು ಜಸ್ಟಿನ್ ಟ್ರೂಡೊ ಕೂಡಾ ಕಾನಿಷ್ಠ ಬಾಂಬ್ ದಾಳಿಯ ಪರಂಪರೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಭಾರತದೊಂದಿಗಿನ ಕೆನಡಾ ಸಂಬಂಧವನ್ನು ಸುಧಾರಿಸಲು ಎಂತಹುದೇ ಬಗೆಯ ಪ್ರಯತ್ನ ನಡೆದರೂ” ಎಂದು ಗಾರ್ ಪಾರ್ಡಿ ಬರೆದುಕೊಂಡಿದ್ದಾರೆ.
ಸೌಜನ್ಯ: indiatoday.in