ಉದ್ಯೋಗ ಸೃಷ್ಟಿಸಲು ಭಾರತ ಶೇ.8ಕ್ಕೂ ಹೆಚ್ಚಿನ ಬೆಳವಣಿಗೆ ದರ ಸಾಧಿಸಬೇಕು: ರಘುರಾಂ ರಾಜನ್

Update: 2023-11-10 16:33 GMT

ರಘುರಾಂ ರಾಜನ್ Photo- PTI

ಹೊಸದಿಲ್ಲಿ : ಭಾರತವು ಸ್ಥಿರ ಬೆಳವಣಿಗೆಯ ಲಕ್ಷಣಗಳನ್ನು ತೋರಿಸುತ್ತಿದೆ, ಆದರೆ ದೇಶದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅದು ಶೇ.8ಕ್ಕೂ ಹೆಚ್ಚಿನ ಬೆಳವಣಿಗೆ ದರವನ್ನು ಸಾಧಿಸುವ ಅಗತ್ಯವಿದೆ ಎಂದು ಮಾಜಿ ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.

ಶುಕ್ರವಾರ ಬೀಜಿಂಗ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ವೀಡಿಯೊ ಲಿಂಕ್ ಮೂಲಕ ಮಾತನಾಡಿದ ಅವರು,‘ಜನಸಂಖ್ಯೆಯ ಅಗತ್ಯಗಳು ಮತ್ತು ಉದ್ಯೋಗಗಳ ಅಗತ್ಯಗಳನ್ನು ಪರಿಗಣಿಸಿದರೆ ನಮ್ಮ ಜಿಡಿಪಿಯು ಶೇ.8-ಶೇ.8.25ರ ದರದಲ್ಲಿ ಬೆಳೆಯಬೇಕು. ಇತರ ದೇಶಗಳಿಗೆ ಹೋಲಿಸಿದರೆ ಶೇ.6-ಶೇ.6.5 ಬೆಳವಣಿಗೆ ದರವು ಸದೃಢವಾಗಿದೆ. ಆದರೆ ಉದ್ಯೋಗಗಳ ನಮ್ಮ ಅಗತ್ಯಗಳಿಗೆ ಹೋಲಿಸಿದರೆ ಅದು ಈಗಲೂ ನಿಧಾನವಾಗಿದೆ ಎಂದು ನಾನು ಭಾವಿಸಿದ್ದೇನೆ. ಏಕೆಂದರೆ ದೇಶದ ಬಹಳಷ್ಟು ಯುವಜನತೆಗೆ ಉದ್ಯೋಗಗಳ ಅಗತ್ಯವಿದೆ ’ ಎಂದರು.

ಮುಂಬೈ ಮೂಲದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ಪ್ರಕಾರ, ಭಾರತದ ಬೆಳವಣಿಗೆಯು ಇತರ ಪ್ರಮುಖ ಆರ್ಥಿಕತೆಗಳನ್ನು ಮೀರಿಸಿದ್ದರೂ ಪ್ರತಿವರ್ಷ ದುಡಿಯುವ ವರ್ಗಕ್ಕೆ ಸೇರುವ ಲಕ್ಷಾಂತರ ಜನರಿಗೆ ಸಾಕಷ್ಟು ಉದ್ಯೋಗಗಳನ್ನು ದೇಶವು ಸೃಷ್ಟಿಸುತ್ತಿಲ್ಲ. ಅಕ್ಟೋಬರ್‌ನಲ್ಲಿ ದೇಶದ ಒಟ್ಟಾರೆ ನಿರುದ್ಯೋಗ ದರವು ಶೇ.10.5ಕ್ಕೆ ಏರಿಕೆಯಾಗಿದೆ. ಇದು ಎರಡು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಗರಿಷ್ಠವಾಗಿದೆ.

ಮುಂದಿನ 10 ವರ್ಷಗಳ ಕಾಲ ದೇಶವು 7 ಕೋ.ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ. ಶೇ.7.5ರ ಬೆಳವಣಿಗೆಯೊಂದಿಗೆ ಉದ್ಯೋಗ ಸಮಸ್ಯೆಯು ಕೇವಲ ಮೂರನೇ ಎರಡು ಭಾಗದಷ್ಟು ಪರಿಹಾರಗೊಳ್ಳಬಹುದು ಎಂದು ಅಂದಾಜಿಸಿರುವ ಎಚ್‌ಎಸ್‌ಬಿಸಿ, ಹೆಚ್ಚಿನ ನಿರುದ್ಯೋಗವು ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮೂರನೇ ಬಾರಿಗೆ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿಯವರಿಗೂ ಆತಂಕಕಾರಿಯಾಗಿದೆ. ಸರಕಾರದ ಅಧಿಕಾರಿಗಳು ಈ ವರ್ಷದ ಅಂತ್ಯದಲ್ಲಿ 10 ಲಕ್ಷ ಸರಕಾರಿ ಉದ್ಯೋಗಗಳನ್ನು ಒದಗಿಸುವ ಮೋದಿಯವರ ಭರವಸೆಯ ಅಂಗವಾಗಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸುವ ಮೂಲಕ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದೆ.

ಭಾರತವು ವಿಯೆಟ್ನಾಂ ಮತ್ತು ಚೀನಾದಂತಹ ಇತರ ಸಮರ್ಥ ಉತ್ಪಾದಕ ದೇಶಗಳೊಂದಿಗೆ ಸ್ಪರ್ಧಿಸುವಂತಾಗಲು ತನ್ನ ಕಾರ್ಯಪಡೆಗೆ ತರಬೇತಿ ನೀಡುವ ಅಗತ್ಯವಿದೆ ಎಂದ ರಾಜನ್,‘ಭಾರತವು ಉತ್ಪಾದನಾ ಕ್ಷೇತ್ರದಲ್ಲಿ ಎತ್ತರಕ್ಕೇರಲು ಪ್ರಯತ್ನಿಸುತ್ತಿದೆ ಮತ್ತು ಅದರ ಕೆಲವು ಲಕ್ಷಣಗಳನ್ನು ನಾವು ನೋಡುತ್ತಿದ್ದೇವೆ ’ ಎಂದು ಐಫೋನ್ ಬಿಡಿಭಾಗಗಳ ಉತ್ಪಾದನೆಯನ್ನು ಉಲ್ಲೇಖಿಸಿ ಹೇಳಿದರು. ‘ಆದಾಗ್ಯೂ ಸಂಪೂರ್ಣ ಸೆಲ್ ಫೋನ್‌ಗಳನ್ನು ತಯಾರಿಸುವಂತಾಗಲು ನಾವು ಇನ್ನೂ ಬಹಳಷ್ಟು ದೂರ ಸಾಗಬೇಕಿದೆ ’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News