ಚಂದ್ರಯಾನ 3 ಯಶಸ್ವಿ; ಚಂದ್ರನಲ್ಲಿ ಭಾರತದ ಐತಿಹಾಸಿಕ ಸಾಧನೆ

Update: 2023-08-23 16:17 GMT

Photo credit: ISRO


ಬೆಂಗಳೂರು: ಭಾರತದ ಚಂದ್ರಯಾನ-3 ಯೋಜನೆಯ ‘ವಿಕ್ರಮ’ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಸಮೀಪ ಬುಧವಾರ ಯಶಸ್ವಿಯಾಗಿ ನೆಲಸ್ಪರ್ಶ ಮಾಡಿದೆ. ಇದರೊಂದಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರನ್ನು ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

ಅದೂ ಅಲ್ಲದೆ, ಚಂದ್ರನ ನೆಲದ ಮೇಲೆ ಲ್ಯಾಂಡರೊಂದನ್ನು ನಿಧಾನವಾಗಿ ಇಳಿಸಿದ ನಾಲ್ಕನೇ ದೇಶ ಭಾರತವಾಗಿದೆ. ಇದಕ್ಕೂ ಮೊದಲು, ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ಚೀನಾ ಈ ಸಾಧನೆಯನ್ನು ಮಾಡಿದ್ದವು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳ ಈ ಸಾಧನೆಯಿಂದ ಇಡೀ ಭಾರತ ಆನಂದ ತುಂದಿಲವಾಗಿದೆ. ಈ ಸಾಧನೆಯೊಂದಿಗೆ ಭಾರತವು ಜಗತ್ತಿನ ಉನ್ನತ ಬಾಹ್ಯಾಕಾಶ ಸಾಧನೆಗೈದ ದೇಶಗಳ ಗುಂಪಿಗೆ ಸೇರ್ಪಡೆಗೊಂಡಿದೆ.

ವಿಕ್ರಮ ಲ್ಯಾಂಡರ್ ಬುಧವಾರ ಸಂಜೆ 6:04ಕ್ಕೆ ಚಂದ್ರನ ನೆಲವನ್ನು ನಿಧಾನವಾಗಿ ಸ್ಪರ್ಶಿಸುತ್ತಿದ್ದಂತೆಯೇ, ಇಸ್ರೋ ವಾರ್ ರೂಮ್‌ನಲ್ಲಿ ವಿಜ್ಞಾನಿಗಳ ಸಂಭ್ರಮದ ಕಟ್ಟೆಯೊಡೆಯಿತು.

ವಿಕ್ರಮ ಲ್ಯಾಂಡರ್ ಚಂದ್ರನ ನೆಲ ಸ್ಪರ್ಶಿಸುವುದಕ್ಕೂ ಮೊದಲು, ಹಲವು ಸಂಕೀರ್ಣ ಕಾರ್ಯಾಚರಣೆಗಳನ್ನು ವಿಜ್ಞಾನಿಗಳು ಮಾಡಿದರು. ವಿಕ್ರಮ ಲ್ಯಾಂಡರ್‌ನ ಕಾರ್ಯಾಚರಣೆಗೆ ನಾಲ್ಕು ಇಂಜಿನ್‌ಗಳಿವೆ. ಆದರೆ, ಚಂದ್ರನಿಂದ ಕೊನೆಯ 30 ಕಿ.ಮೀ. ವ್ಯಾಪ್ತಿಯಲ್ಲಿ ಲ್ಯಾಂಡರ್‌ನ ವೇಗವನ್ನು ಕಡಿಮೆ ಮಾಡುವುದಕ್ಕಾಗಿ ಎರಡು ಇಂಜಿನ್‌ಗಳನ್ನು ನಿಷ್ಕ್ರಿಯಗೊಳಿಸಲಾಯಿತು.

ಚಂದ್ರಯಾನ-3 ವ್ಯೋಮನೌಕೆಯನ್ನು ಜುಲೈ 14ರಂದು ಎಲ್‌ವಿಎಮ್‌3 ರಾಕೆಟ್ ಮೂಲಕ ಉಡಾಯಿಸಲಾಗಿತ್ತು. ಅದನ್ನು ಆಗಸ್ಟ್ 5ರಂದು ಚಂದ್ರನ ಕಕ್ಷೆಗೆ ಸೇರಿಸಲಾಗಿತ್ತು.

ಲ್ಯಾಂಡರ್ ‘ವಿಕ್ರಮ್’ಗೆ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯ್‌ರ ಹೆಸರನ್ನು ಇಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News