ಶುಕ್ರವಾರ ಚಂದ್ರನೆಡೆಗೆ ಭಾರತದ ಯಾನ
ಹೊಸದಿಲ್ಲಿ: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಶುಕ್ರವಾರ ಉಡಾವಣೆಗೊಳ್ಳಲಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಇಡೀ ದೇಶವೇ ಕಾತರದಿಂದ ಕಾಯುತ್ತಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಹೊಸ ಮೈಲುಗಲ್ಲು ಎಂದೇ ಬಣ್ಣಿಸಲಾಗಿರುವ ಚಂದ್ರನೆಡೆಗೆ ಭಾರತದ ಮೂರನೇ ಮಿಶನ್ ಸಂಪೂರ್ಣ ಯಶಸ್ವಿಯಾಗಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಸಕಲ ಸಿದ್ದತೆ ಮಾಡಿಕೊಂಡಿದೆ.
ಶ್ರೀಹರಿಕೋಟಾದ ಸತೀಶ್ಧನ್ ಉಡಾವಣಾ ಕೇಂದ್ರದಲ್ಲಿ ಎಲ್ವಿಎಂ3 ಎಂ4 ರಾಕೆಟ್ ಉಡಾವಣೆಗೆ ಸಜ್ಜಾಗಿ ನಿಂತಿದ್ದು, ಗುರುವಾರ ಮಧ್ಯಾಹ್ನ 1-05ಕ್ಕೆ 25 ಗಂಟೆಗಳ ಕೌಂಟ್ಡೌನ್ ಆರಂಭಗೊಂಡಿದೆ.
ಚಂದ್ರಯಾನ ನೌಕೆಯನ್ನು ಹೊತ್ತ ಎಲ್ವಿಎಂ 3 ರಾಕೆಟ್ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂ ಶುಕ್ರವಾರ ಮಧ್ಯಾಹ್ನ 2:35ರ ವೇಳೆಗೆ ಉಡಾವಣೆಗೊಳ್ಳಲಿದೆ.ಈ ಉಡಾವಣೆಗೆ ಸ್ವದೇಶಿ ನಿರ್ಮಿತ ಲಾಂಚರ್ಗಳನ್ನು ಬಳಸಲಾಗಿದೆ. ಲ್ಯಾಂಡರ್ ಹಾಗೂ ರೋವರ್ಗಳನ್ನು ಕೂಡಾ ದೇಶೀಯವಾಗಿ ನಿರ್ಮಿಸಲಾಗಿದೆ. ಆಗಸ್ಟ್ 23ರಂದು ಚಂದ್ರನ ಧ್ರುವಪ್ರದೇಶದ ಮೇಲೆ ಲ್ಯಾಂಡರ್ ಇಳಿಯಲಿದೆ. ಅದರ ಜೊತೆಗಿರುವ ರೋವರ್ ನೌಕೆಯು ಚಂದ್ರನ ಮೇಲ್ಮೈಯಲ್ಲಿ ಸಂಚರಿಸುತ್ತಾ ಸಂಶೋಧನೆಗಳನ್ನು ನಡೆಸಲಿದೆ.
ಚಂದ್ರನ ಮೇಲೆ ಲ್ಯಾಂಡರ್ ನೌಕೆಯು ಯಶಸ್ವಿಯಾಗಿ ಇಳಿದಲ್ಲಿ, ಆ ಸಾಧನೆಯನ್ನು ಮಾಡಿದ ಜಗತ್ತಿನ ನಾಲ್ಕನೇ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತವು ಪಾತ್ರವಾಗಲಿದೆ. ಅಮೆರಿಕ,ರಶ್ಯ, ಚೀನಾ ಈವರೆಗೆ ಚಂದ್ರನಲ್ಲಿ ತಮ್ಮ ನೌಕೆಯನ್ನು ಯಶಸ್ವಿಯಾಗಿ ಇಳಿಸುವಲ್ಲಿ ಸಫಳವಾದ ರಾಷ್ಟ್ರಗಳಾಗಿವೆ.
2019ರಲ್ಲಿ ಭಾರತವು ಚಂದ್ರಯಾನ 2ರಡಿ ಕಳುಹಿಸಿದ ವಿಕ್ರಮ ಲ್ಯಾಂಡರ್ ನೌಕೆಯು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವಲ್ಲಿ ವಿಫಲವಾಗಿತ್ತು. ಆದರೆ ಈ ಸಲದ ಮಿಶನ್ ಸಂಪೂರ್ಣವಾಗಿ ಯಶಸ್ವಿಯಾಗಲು ಇಸ್ರೋ ಸಕಲ ಸಿದ್ಧತೆ ಮಾಡಿಕೊಂಡಿದೆ. ಚಂದ್ರನ ಮೇಲ್ಮೈ ಮೇಲೆ ಇಳಿಯಲಿರುವ ಲ್ಯಾಂಡರ್, ವಿವಿಧ ಸನ್ನಿವೇಶಗಳಲ್ಲಿ ಹೇಗೆ ಕಾರ್ಯನಿರ್ವಹಿಸಬಹುದೆಂಬ ಬಗ್ಗೆ ಸರಣಿ ಪರೀಕ್ಷೆಗಳನ್ನು ನಡೆಸಿದ ಬಳಿಕ ಅದರ ವಿನ್ಯಾಸದಲ್ಲಿ ಸುಧಾರಣೆಯನ್ನು ಮಾಡಲಾಗಿದೆ.
ಎಲ್ವಿಎಂ3 ರಾಕೆಟ್ ಉಡಾವಣೆಗೊಂಡ 16 ನಿಮಿಷಗಳ ಬಳಿಕ ಭೂಮಿಯಿಂದ 179 ಕಿ.ಮೀ. ಎತ್ತರದಲ್ಲಿ ಪ್ರೊಪಲ್ಶನ್ ಮೊಡ್ಯೂಲ್ ಮುಖ್ಯ ರಾಕೆಟ್ನಿಂದ ಪ್ರತ್ಯೇಕಗೊಳ್ಳಲಿದೆ. ಈ ನೌಕೆಯು ಭೂಮಿಯನ್ನು 5-6 ಬಾರಿ ಪ್ರದಕ್ಷಿಣೆಗೈಯುತ್ತಾ ಹಂತಹಂತವಾಗಿ ಭೂಮಿಯ ಗುರುತ್ವಾಕರ್ಷಣೆಯಿಂದ ತಪ್ಪಿಸಿಕೊಳ್ಳಲಿದೆ. ಆನಂತರ ಭೂಮಿಯಿಂದ 36,500 ಕಿ.ಮೀ. ದೂರದವರೆಗೆ ಸಂಚರಿಸಿ ಚಂದ್ರನ ಕಕ್ಷೆಯನ್ನು ತಲುಪಲಿದೆ.ಆನಂತರ ತನ್ನೊಂದಿಗೆ ರೋವರ್ ಅನ್ನು ಹೊತ್ತಿರುವ ಲ್ಯಾಂಡರ್ ನೌಕೆಯು , ಪ್ರೊಪಲ್ಶನ್ ಮೊಡ್ಯೂಲ್ನಿಂದ ಪ್ರತ್ಯೇಕಗೊಂಡ ಬಳಿಕ ಚಂದ್ರನ ಮೇಲ್ಮೈಯಲ್ಲಿ ಇಳಿಯಲಾರಂಭಿಸುತ್ತದೆ.
ಇಡೀ ಪ್ರಕ್ರಿಯೆಗೆ ಸುಮಾರು 42 ದಿನಗಳು ತಗಲುವ ನಿರೀಕ್ಷೆಯಿದೆ. ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ನೌಕೆಯು ಇಳಿಯಲಿದೆ. ಭೂಮಿಯಲ್ಲಿನ 14 ದಿನಗಳ ಅವಧಿಗೆ ಈ ನೌಕೆಯು ಚಂದ್ರನಲ್ಲಿ ಕಾರ್ಯನಿರ್ವಹಿಸಲಿದೆ. ಚಂದ್ರನ ಒಂದು ಹಗಲು ಅಂದರೆ ಭೂಮಿಯ 14 ದಿನಗಳಿಗೆ ಸಮವಾಗಿದೆ. ರಾತ್ರಿ ಹೊತ್ತಿನಲ್ಲಿ ಚಂದ್ರನ ತಾಪಮಾನದಲ್ಲಿ ತೀವ್ರ ಇಳಿಕೆಯಾಗುವುದರಿಂದ ಅದನ್ನು ತಾಳಿಕೊಳ್ಳಲು ನೌಕೆಗಳಿಗೆ ಸಾಧ್ಯವಿಲ್ಲದಿರುವುದರಿಂದ ಅದು ಚಂದ್ರನ ಮುಂಜಾವಿನಲ್ಲಿ ಇಳಿಯಬೇಕಾಗುತ್ತದೆ.
2019ರಲ್ಲಿ ಉಡಾವಣೆಯಾದ ಚಂದ್ರಯಾನ 2ನಲ್ಲಿ ಆರ್ಬಿಟರ್ ನೌಕೆಯು ಚಂದ್ರನ ಕಕ್ಷೆಯನ್ನು ತಲುಪುವಲ್ಲಿ ಯಶಸ್ವಿಯಾಗಿತ್ತು. ಆದರೆ ರೋವರ್ ಅನ್ನು ಲ್ಯಾಂಡರ್ ನೌಕೆಯು ಸಾಫ್ಟ್ ಲ್ಯಾಂಡಿಂಗ್ ಆಗಲು ಸಾಧ್ಯವಾಗದೆ ವೇಗವಾಗಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು.
ಚಂದ್ರಯಾನ 3 ರಲ್ಲಿ ಆರ್ಬಿಟರ್ ನೌಕೆಯನ್ನು ಕೊಂಡೊಯ್ಯಲಾಗುವುದಿಲ್ಲ. ಚಂದ್ರಯಾನ2 ಆರ್ಬಿಟರ್ನಲ್ಲಿ ಲಭ್ಯವಾದ ದತ್ತಾಂಶಗಳನ್ನು ಅದು ಬಳಸಿಕೊಳ್ಳಲಿದೆ. ಚಂದ್ರಯಾನ 3ರ ಉದ್ದೇಶಗಳು
1.ಚಂದ್ರನ ಮೇಲ್ಮೈ ಮೇಲೆ ನೌಕೆಯನ್ನು ಸುರಕ್ಷಿತವಾಗಿ ಹಾಗೂ ಸಾಫ್ಟ್ ಲ್ಯಾಂಡಿಂಗ್ ಮಾಡಲು ಸಾಧ್ಯವಾಗಿಸುವುದು.
2. ಚಂದ್ರನ ಕಕ್ಷೆಯಲ್ಲಿದ್ದುಕೊಂಡು ಭೂಮಿಯ ಅಧ್ಯಯನ. ಭೂಮಿ ಹಾಗೂ ಚಂದ್ರನ ನಡುವೆ ಇರುವ ಅಂತರವನ್ನು ಅತ್ಯಂತ ನಿಖರವಾಗಿ ಅಳೆಯುವ ಪ್ರಯೋಗವನ್ನು ನಡೆಸುವುದು.
3. ಚಂದ್ರನ ಧ್ರುವಪ್ರದೇಶದ ಗುಣಲಕ್ಷಣಗಳು ಹಾಗೂ ಭೂಕಂಪನ ಚಟುವಟಿಕೆಗಳನ್ನು ವಿಶ್ಲೇಷಿಸುವುದು.
4 .ಚಂದ್ರನ ಹೊರಪದರದ ಪರಿಶೀಲನೆ
5.ಚಂದ್ರನ ಮೇಲ್ಮೈಯ ರಾಸಾಯನಿಕ ಹಾಗೂ ಖನಿಜಗಳ ಸಂಯೋಜನೆಯ ಬಗ್ಗೆ ಅಧ್ಯಯನ.