ಇಂಡಿಗೊ ವಿಮಾನದ ಅವಾಂತರ: ಮುಂಬೈನಲ್ಲಿ ಸಿಲುಕಿಕೊಂಡ ಬಹ್ರೈನ್‌ಗೆ ತೆರಳುತ್ತಿದ್ದ ಮಂಗಳೂರು ಪ್ರಯಾಣಿಕರು

Update: 2023-12-23 10:59 GMT

ಸಾಂದರ್ಭಿಕ ಚಿತ್ರ

ಮಂಗಳೂರು: ಡಿಸೆಂಬರ್ 20ರಂದು ನಡೆದಿರುವ ಘಟನೆಯಲ್ಲಿ ಸಂವಹನ ಕೊರತೆ, ಪ್ರಯಾಣದ ಅವಧಿಯಲ್ಲಿನ ತೀವ್ರ ವಿಳಂಬ, ಕಳಪೆ ಸೇವೆ ಹಾಗೂ ಲಗೇಜ್ ಬ್ಯಾಗ್‌ಗಳು ಸಿಲುಕಿಕೊಂಡಿದ್ದರಿಂದ ಮಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದ ಇಂಡಿಗೊ ವಿಮಾನ ಪ್ರಯಾಣಿಕರಿಗೆ ಸಂದಿಗ್ದ ಸ್ಥಿತಿ ನಿರ್ಮಾಣವಾದ ಬಗ್ಗೆ ವರದಿಯಾಗಿದೆ.

ಮಂಗಳೂರಿನಿಂದ ಮುಬೈಗೆ ಹೋಗಿ

ಅಲ್ಲಿಂದ ಬಹ್ರೈನ್‌ಗೆ ತೆರಳುವ ಸಂಪರ್ಕ ವಿಮಾನದಲ್ಲಿ ತೆರಳಬೇಕಿದ್ದ ಇಬ್ಬರು ಪ್ರಯಾಣಿಕರು ವಿಮಾನ ಯಾನ ಸಂಸ್ಥೆಯ ಕಳಪೆ ನಿರ್ವಹಣೆಯಿಂದಾಗಿ ತೀವ್ರ ತೊಂದರೆಗೆ ಸಿಲುಕಿದ್ದರು ಎಂದು ದೂರಲಾಗಿದೆ.

ಈ ಸಮಸ್ಯೆ ಡಿಸೆಂಬರ್ 20ರಂದು ಸಂಜೆ 4.50 ಕ್ಕೆ ಮಂಗಳೂರಿನಿಂದ ಮುಂಬೈಗೆ ತೆರಳಬೇಕಿದ್ದ ಇಂಡಿಗೊ ವಿಮಾನವು ಮಂಗಳೂರು ವಿಮಾನ ನಿಲ್ದಾಣಕ್ಕೆ ತಡವಾಗಿ ಆಗಮಿಸಿ , ರಾತ್ರಿ 7 ಗಂಟೆಗೆ ಪ್ರಯಾಣ ಬೆಳೆಸಿದಲ್ಲಿನಿಂದ ಪ್ರಾರಂಭವಾಗಿದೆ. ಇದರಿಂದ ಮುಂಬೈನಿಂದ ಬಹ್ರೈನ್‌ಗೆ ಅದೇ ಸಂಸ್ಥೆಯ ಸಂಪರ್ಕ ವಿಮಾನದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರಿಗೆ ತೀವ್ರ ತೊಂದರೆಯಾಯಿತು.

ರಾತ್ರಿ 8.40 ಕ್ಕೆ ಮುಂಬೈಗೆ ಪ್ರಯಾಣಿಕರು ಆಗಮಿಸಿದಾಗ, ಬಹ್ರೈನ್‌ಗೆ ತೆರಳಬೇಕಿದ್ದ ಸಂಪರ್ಕ ವಿಮಾನ ಹೊರಡಲು ಸಿದ್ಧವಾಗಿತ್ತು. ಹಾಗಾಗಿ ಇನ್ನು ಇಮಿಗ್ರೇಷನ್ ಪ್ರಕ್ರಿಯೆ ಮುಗಿಸಿ ಅದರಲ್ಲಿ ಪ್ರಯಾಣಿಸುವುದು ಸಾಧ್ಯವಿಲ್ಲ ಎಂದು ಮಂಗಳೂರಿನಿಂದ ತೆರಳಿದ್ದ ಪ್ರಯಾಣಿಕರಿಗೆ ಇಂಡಿಗೋ ಸಿಬ್ಬಂದಿ ಹೇಳಿದ್ದಾರೆ. ಈ ಪೈಕಿ ಇಬ್ಬರು ಪ್ರಯಾಣಿಕರು ತಾವು ಕಾರ್ಯನಿಮಿತ್ತ ತುರ್ತಾಗಿ ಬಹ್ರೈನ್‌ಗೆ ತೆರಳಬೇಕಿದೆ ಎಂದು ಮನವಿ ಮಾಡಿದರೂ, ಇಂಡಿಗೊ ವಿಮಾನ ಯಾನ ಸಂಸ್ಥೆಯ ಸಿಬ್ಬಂದಿಗಳು ತೀವ್ರ ನಿರ್ಲಕ್ಷ್ಯದಿಂದ ಪ್ರಯಾಣಿಕರೊಂದಿಗೆ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಬೇರೇನೂ ಮಾಡುವ ಹಾಗಿಲ್ಲ, ಮರುದಿನ ರಾತ್ರಿಯ ವಿಮಾನದಲ್ಲಿ ತೆರಳುವಂತೆ ಅವರಿಗೆ ಸೂಚಿಸಿದ್ದಾರೆ.

ಸ್ವತಃ ವಿಮಾನ ಯಾನ ಸಂಸ್ಥೆಯಿಂದಲೇ ವಿಳಂಬವಾಗಿದ್ದರೂ, ಪ್ರಯಾಣಿಕರಿಗೆ ಯಾವುದೇ ವಾಸ್ತವ್ಯ, ಆಹಾರ ಅಥವಾ ಪರಿಹಾರವನ್ನು ಒದಗಿಸಲಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಇದರಿಂದ ತಮ್ಮ ಪ್ರಯಾಣ ಯೋಜನೆಯು ಸಂಪೂರ್ಣ ಏರುಪೇರಾಯಿತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಿಕೆಟ್ ಹಣದ

ಮರುಪಾವತಿಗಾಗಿ ಕೇಳಿದಾಗ, ಇಂಡಿಗೋ ಮೇಲ್ವಿಚಾರಕರು ಭಾಗಶಃ ಮರುಪಾವತಿ ಭರವಸೆ ನೀಡಿದರು. ಕೆಲವು ದಿನಗಳ ನಂತರ ಮರುಪಾವತಿ ಪ್ರಕ್ರಿಯೆ ಮಾಡಲಾಗುವುದು. ತಕ್ಷಣಕ್ಕೆ ಸಾಧ್ಯವಿಲ್ಲ ಎಂದರು.

ಬಳಿಕ ಆ ಇಬ್ಬರು ಪ್ರಯಾಣಿಕರು ಸುಮಾರು 35 ಸಾವಿರ ರೂಪಾಯಿ ಪ್ರತಿ ಟಿಕೆಟ್ ಗೆ ಪಾವತಿಸಿ ಖತರ್ ಏರ್ ಲೈನ್ಸ್ ನಲ್ಲಿ ಬಹರೈನ್ ಗೆ ಹೊಸ ಟಿಕೆಟ್ ಖರೀದಿಸಿದರು.

ವಿಮಾನ ಬದಲಾವಣೆಯೊಂದಿಗೆ ಪ್ರಯಾಣಿಕರ ಸವಾಲುಗಳು ಕೊನೆಗೊಳ್ಳಲಿಲ್ಲ. ಮಂಗಳೂರಿನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದ ಅವರ ಲಗೇಜ್ ಬಗ್ಗೆ ವಿಚಾರಿಸಿದಾಗ, ಅವರ ಲಗೇಜ್ ಮಂಗಳೂರಿನಲ್ಲಿಯೇ ಬಾಕಿಯಾಗಿದೆ, ಮುಂಬೈಗೆ ರವಾನೆಯಾಗಿಲ್ಲ ಎಂದು ತಿಳಿಸಲಾಯಿತು. ಅದನ್ನೂ ಹೇಳಿದ್ದು ಮುಂಬೈ ತಲುಪಿದ ಕೆಲವು ಗಂಟೆಗಳ ಬಳಿಕ.

ಪ್ರಯಾಣಿಕರು ತಮ್ಮ ಲಗೇಜ್‌ ಗಾಗಿ ಕಾಯುವಂತೆ ಪದೇ ಪದೇ ಹೇಳಿದಾಗ ಪರಿಸ್ಥಿತಿ ಮತ್ತಷ್ಟು ಗಂಭೀರವಾಯಿತು. ರಾತ್ರಿ 1:00 ಗಂಟೆಗೆ, ಇಂಡಿಗೋ ಸಿಬ್ಬಂದಿಗಳು ತಮ್ಮ ಲಗೇಜ್ ಅನ್ನು ಮಂಗಳೂರಿ ನಲ್ಲೇ ಬಿಟ್ಟಿದ್ದಾರೆ ಎಂದು ಖಚಿತಪಡಿಸಿದರು. ಪ್ರಯಾಣಿಕರು ತಮ್ಮ ಲಗೇಜ್ , ಬಟ್ಟೆ ಬರೆ ಏನೂ ಇಲ್ಲದೆ ಮುಂಬೈನಲ್ಲಿ ಸಿಲುಕಿಕೊಂಡರು.

ಇಬ್ಬರಲ್ಲಿ ಒಬ್ಬರಿಗೆ ಬಹರೈನ್ ನಿಂದ ಮರುದಿನ ಜಿದ್ದಾ ಗೆ ಹೋಗಬೇಕಿತ್ತು.

ಇಂಡಿಗೋ

ಸಿಬ್ಬಂದಿ ಆರಂಭದಲ್ಲಿ ಪ್ರಯಾಣಿಕರಿಗೆ ತಮ್ಮ ಲಗೇಜ್‌ಗಳನ್ನು ಜಿದ್ದಾಕ್ಕೆ ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಆ ಬಳಿಕ , ನಾವು ಕಳಿಸಿ ಕೊಡುವುದಿಲ್ಲ, ನೀವೇ ವಿಮಾನ ನಿಲ್ದಾಣಕ್ಕೆ ಬಂದು ಪಡೆದುಕೊಳ್ಳಿ ಎಂದು ಹೇಳಲಾಯಿತು. ಆದರೆ ಜಿದ್ದಾ ತಲುಪಿ ಅಲ್ಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಕಚೇರಿಗೆ ಹೋಗಿ ಕೇಳಿದಾಗ, ಲಗೇಜ್‌ಗಳು ಬಹ್ರೇನ್‌ಗೆ ತಲುಪಿದೆ, ಜಿದ್ದಾಗೆ ಬಂದಿಲ್ಲ ಎಂದು ತಿಳಿಸಿಲಾಯಿತು. ಹೀಗಾಗಿ ಮೊದಲೇ ಬಸವಳಿದಿದ್ದ ಪ್ರಯಾಣಿಕರು ಇನ್ನಷ್ಟು ತೊಂದರೆಗೆ ಸಿಲುಕಿದರು.

ಹಾಸ್ಯನಟ ಕಪಿಲ್ ಶರ್ಮಾ ಅವರ ಇತ್ತೀಚಿನ ಇಂಡಿಗೋ ವಿರುದ್ಧದ ದೂರು ಸೇರಿದಂತೆ ಇತರ ದೂರುಗಳ ಹಿನ್ನೆಲೆಯಲ್ಲಿ ಈ ಘಟನೆಯು ಮುನ್ನಲೆಗೆ ಬಂದಿದೆ. ಶರ್ಮಾ ಅವರು ಇಂಡಿಗೋ ವಿಮಾನಯಾನ ಸೇವೆಗಳ ಬಗ್ಗೆ ತಮ್ಮ ತೀವ್ರ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿ, ಭವಿಷ್ಯದಲ್ಲಿ ಇಂಡಿಗೋದಲ್ಲಿ ಎಂದೂ ಪ್ರಯಾಣ ಮಾಡುವುದಿಲ್ಲ ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News