ಪೈಲಟ್‌ಗಳಿಗೆ ಆಯಾಸ ವಿಶ್ಲೇಷಣಾ ಸಾಧನ ಬಳಸಲಿರುವ ಇಂಡಿಗೋ
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕಾಕ್‌ಪಿಟ್ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಆಯಾಸದ ಸಮಸ್ಯೆಗಳನ್ನು ಪತ್ತೆಹಚ್ಚಲು ವಿಶ್ಲೇಷಣಾ ಸಾಧನವನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ತಂತ್ರಜ್ಞಾನ ಲೈವ್ ವಿಶ್ಲೇಷಣೆಗಳ ಮೂಲಕ ಪೈಲಟ್‌ಗಳಲ್ಲಿ ಆಯಾಸವನ್ನು ಪತ್ತೆಹಚ್ಚುವ ವಿಶೇಷತೆಯನ್ನು ಹೊಂದಿದೆ
ಹೊಸದಿಲ್ಲಿ : ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ಕಾಕ್‌ಪಿಟ್ ಸಿಬ್ಬಂದಿಯಲ್ಲಿ ಹೆಚ್ಚುತ್ತಿರುವ ಆಯಾಸದ ಸಮಸ್ಯೆಗಳನ್ನು ಪತ್ತೆಹಚ್ಚಲು ವಿಶ್ಲೇಷಣಾ ಸಾಧನವನ್ನು ಪರಿಚಯಿಸಲು ಮುಂದಾಗಿದೆ. ಈ ಹೊಸ ತಂತ್ರಜ್ಞಾನ ಲೈವ್ ವಿಶ್ಲೇಷಣೆಗಳ ಮೂಲಕ ಪೈಲಟ್‌ಗಳಲ್ಲಿ ಆಯಾಸವನ್ನು ಪತ್ತೆಹಚ್ಚುವ ವಿಶೇಷತೆಯನ್ನು ಹೊಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಥೇಲ್ಸ್ ಗ್ರೂಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಇಂಡಿಗೋ, ಮುಂದಿನ ಕೆಲವು ತಿಂಗಳುಗಳಲ್ಲಿ ವಿಮಾನಯಾನದ ಸಂದರ್ಭ ಪೈಲಟ್ ವಹಿಸುವ ಎಚ್ಚರಿಕೆಯ ಮಟ್ಟವನ್ನು ಏರ್‌ಲೈನ್ ಪ್ರೂಫ್-ಆಫ್-ಕಾನ್ಸೆಪ್ಟ್ ಪ್ರಯೋಗದ ಮೂಲಕ ಅಳೆಯಲಿದೆ.
"ಈ ವಿಶೇಷ ಸಾಧನದ ಮೂಲಕ ಲೈವ್ ಡೇಟಾ, ಈ ಹಿಂದಿನ ಹಾರಾಟದ ವಿವರ ಮತ್ತು ಮುನ್ಸೂಚಕ ವಿಶ್ಲೇಷಣೆಗಳನ್ನು ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಎಲ್ಲಾ ಡೇಟಾಗಳ ಖಾಸಗಿತನವನ್ನು ಕಾಪಾಡಲಾಗುತ್ತದೆ " ಎಂದು ಇಂಡಿಗೋ ಬುಧವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಪೈಲಟ್‌ನ ಸಾವಿನ ನಂತರ ಪೈಲಟ್‌ಗಳಲ್ಲಿ ಆಯಾಸದ ಸಮಸ್ಯೆಯ ಬಗ್ಗೆ ಇಂಡಿಗೋ ಸಂಸ್ಥೆ ಗಮನಹರಿಸುತ್ತಿದೆ. ಕಳೆದ ವಾರ ಪುಣೆಗೆ ಹಾರಾಟ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಪೈಲಟ್ ಒಬ್ಬರು ನಾಗ್ಪುರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್‌ನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.
"ನಮ್ಮ ಪೈಲಟ್‌ಗಳ ಯೋಗಕ್ಷೇಮವನ್ನು ಕಾಪಾಡಲು ನಾವು ಬದ್ಧರಾಗಿದ್ದೇವೆ. ಅವರ ಆರೋಗ್ಯ ಮತ್ತು ಮಾನಸಿಕ ಯೋಗಕ್ಷೇಮ ನಮಗೆ ಮುಖ್ಯ. ಆ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುತ್ತೇವೆ" ಎಂದು ಇಂಡಿಗೋ ತಿಳಿಸಿದೆ.