ಇಂದಿರಾ ಗಾಂಧಿ ಹಲವಾರು ಆರೆಸ್ಸೆಸ್ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು, ಆದರೆ...: ನೂತನ ಕೃತಿಯಲ್ಲಿರುವುದೇನು?

Update: 2023-08-03 18:07 GMT

ಹೊಸದಿಲ್ಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಹಲವಾರು ಆರೆಸ್ಸೆಸ್ ನಾಯಕರೊಂದಿಗೆ ಉತ್ತಮ ಸಂಬಂಧವಿತ್ತು ಹಾಗೂ ಸಂಘದ ನಾಯಕರು ಅವರ ನೆರವು ಪಡೆಯಲು ಧಾವಿಸಿದಾಗ, ಅವರು ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದರಾದರೂ, ತಮ್ಮ ಹಾಗೂ ಸಂಘದ ನಡುವೆ ಎಚ್ಚರಿಕೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು ಎಂದು ನೂತನ ಕೃತಿಯೊಂದು ಪ್ರತಿಪಾದಿಸಿದೆ ಎಂದು ವರದಿಯಾಗಿದೆ.

"ಹೌ ಪ್ರೈಮ್ ಮಿನಿಸ್ಟರ್ಸ್ ಡಿಸೈಡ್" (How Prime Ministers Decide) ಎಂಬ ತಮ್ಮ ಕೃತಿಯಲ್ಲಿ ಪತ್ರಕರ್ತೆ ನೀರಜ ಚೌಧುರಿ, 1980ರ ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿ ಹೇಗೆ ಅಧಿಕಾರಕ್ಕೆ ಮರಳಲು ಕಾರ್ಯತಂತ್ರ ರೂಪಿಸಿದರು, ಶಾ ಬಾನೊ ಪ್ರಕರಣ, ಮಂಡಲ್ ವರದಿ, ಬಾಬರಿ ಮಸೀದಿ ಘಟನೆ, ಅಣು ಬಾಂಬ್ ಪರೀಕ್ಷೆ ನಡೆಸಲು ಅಟಲ್ ಬಿಹಾರಿ ವಾಜಪೇಯಿ ಸಮ್ಮತಿ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕಾ ನಡುವಿನ ಅಣು ಒಪ್ಪಂದ ಸೇರಿದಂತೆ ಐತಿಹಾಸಿಕ ಮಹತ್ವ ಹೊಂದಿರುವ ಆರು ನಿರ್ಧಾರಗಳ ಸಂದರ್ಭದಲ್ಲಿ ದೇಶದ ಪ್ರಧಾನಿಗಳ ಕಾರ್ಯಶೈಲಿ ಹೇಗಿತ್ತು ಎಂಬುದನ್ನು ವಿಶ್ಲೇಷಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ತುರ್ತು ಪರಿಸ್ಥಿತಿಯುದ್ದಕ್ಕೂ ಇಂದಿರಾ ಗಾಂಧಿ ಅವರಿಗೆ ನೆರವು ನೀಡಿತು ಎಂದು ಈ ಕೃತಿಯು ಪ್ರತಿಪಾದಿಸಿದೆ.

"ಆರೆಸ್ಸೆಸ್ ಮುಖ್ಯಸ್ಥ ಬಾಳಾಸಾಹೇಬ್ ದಿಯೋರಸ್ ಹಲವಾರು ಬಾರಿ ಅವರಿಗೆ ಪತ್ರಗಳನ್ನು ಬರೆದಿದ್ದರು. ಕಪಿಲ್ ಮೋಹನ್ ಮೂಲಕ ಕೆಲವು ಆರೆಸ್ಸೆಸ್ ನಾಯಕರು ಸಂಜಯ್ ಗಾಂಧಿಯನ್ನು ಸಂಪರ್ಕಿಸಿದ್ದರು. ನಂತರ 1977ರಲ್ಲಿ ಅವರು ಅದಕ್ಕೆ ಹೇಗೆ ಸ್ಪಂದಿಸಬೇಕು ಎಂಬುದನ್ನು ನೋಡಬೇಕಿತ್ತು. ಆದರೆ, ಅವರು ಅದನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಿದರು" ಎಂದು ನೀರಜ ಚೌಧುರಿ ಬರೆದಿದ್ದಾರೆ.

"ಆರೆಸ್ಸೆಸ್ ನಾಯಕರು ಹೇಗೆ ಅವರನ್ನು ಸಂಪರ್ಕಿಸುತ್ತಿದ್ದರೋ ಅದೇ ರೀತಿ ಅವರೂ ಕೂಡಾ ಆರೆಸ್ಸೆಸ್ ಅನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ, ತಮ್ಮ ಹಾಗೂ ಸಂಘಟನೆಯ ನಡುವೆ ಎಚ್ಚರಿಕೆಯಿಂದ ಅಂತರ ಕಾಯ್ದುಕೊಂಡಿದ್ದರು. ಆರೆಸ್ಸೆಸ್ ಬಗೆಗಿನ ಅವರ ಎಲ್ಲ ವಿರೋಧದ ಹೊರತಾಗಿಯೂ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆರೆಸ್ಸೆಸ್ ನೆರವು ಪಡೆಯುವಲ್ಲಿ ಯಶಸ್ವಿಯಾಗಿದ್ದರು" ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ಬಗೆಗಿನ ಮುಸ್ಲಿಮರ ಅಸಮಾಧಾನವನ್ನು ಗಮನಿಸಿದ್ದ ಅವರು, ಆರೆಸ್ಸೆಸ್ ನಿಂದ ಮೌನ ನೆರವು ಪಡೆಯುವುದು ಅಥವಾ ತನ್ನೆಡೆಗೆ ಅದು ತಟಸ್ಥ ನಿಲುವು ತೆಗೆದುಕೊಳ್ಳುವುದರಿಂದ ತನ್ನ ರಾಜಕೀಯವನ್ನು ಹಿಂದೂಕರಣ ಮಾಡಲು ಬಯಸಿದ್ದರು ಎಂದು ಕೃತಿಯಲ್ಲಿ ನೀರಜ ಚೌಧುರಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದಿರಾ ಗಾಂಧಿ ಕುರಿತ ಕೃತಿಯು ಅಧಿಕಾರ ಮತ್ತು ಉನ್ನತ ಸಾರ್ವಜನಿಕ ಸ್ಥಾನಮಾನಗಳನ್ನು ಹೊಂದಿದ್ದವರ ಅಧಿಕಾರ ಪ್ರಯೋಗದ ಕುರಿತಾಗಿದೆ ಎಂದು ಕೃತಿಕಾರ ನೀರಜ ಚೌಧುರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News