ಸಾಲ ಮನ್ನಾ ಮಿತಿ 2 ಲಕ್ಷಕ್ಕೇರಿಸಿದ ಜಾರ್ಖಂಡ್ ಸರ್ಕಾರ; ಚುನಾವಣಾ ತಂತ್ರ ಎಂದ ಬಿಜೆಪಿ
ರಾಂಚಿ: ರಾಜ್ಯದಲ್ಲಿ ಕೃಷಿ ಸಾಲ ಮನ್ನಾ ಮಿತಿಯನ್ನು 50 ಸಾವಿರ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಐತಿಹಾಸಿಕ ನಿರ್ಧಾರವನ್ನು ಜಾರ್ಖಂಡ್ ಸರ್ಕಾರ ಗುರುವಾರ ಘೋಷಿಸಿದ್ದು, 1.77 ಲಕ್ಷ ರೈತರು ಅದೇ ದಿನ ಇದರ ಪ್ರಯೋಜನ ಪಡೆದಿದ್ದಾರೆ.
"ರೈತರು ದೇಶದ ಬೆನ್ನೆಲುಬು. ಆಹಾರ ಉತ್ಪಾದನೆಗೆ ಹಣಕಾಸು ಇತಿಮಿತಿಗಳು ಹಾಗೂ ಪ್ರತಿಕೂಲ ಹವಾಮಾನದ ನಡುವೆ ಅವರು ಹೋರಾಟ ನಡೆಸುತ್ತಾ ಬಂದಿದ್ದಾರೆ. ಅನ್ನದಾತರಿಗೆ ನೆರವಾಗುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ" ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರಿ ಒಡೆತನದ ಮೇಧಾ ಡೈರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ರಾಷ್ಟ್ರೀಯ ಹೈನುಗಾರಿಕೆ ಅಭಿವೃದ್ಧಿ ನಿಗಮದ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ.
2019ರ ಚುನಾವಣೆಯಲ್ಲಿ ಸೊರೇನ್ ನೇತೃತ್ವದ ಯುಪಿಎ ಮೈತ್ರಿಕೂಟ 2 ಲಕ್ಷ ರೂಪಾಯಿ ಕೃಷಿ ಸಾಲ ಮನ್ನಾ ಯೋಜನೆಯನ್ನು ಘೋಷಿಸಿತ್ತು. ಆದರೆ ಸರ್ಕಾರ 50 ಸಾವಿರ ರೂಪಾಯಿಯೊಂದಿಗೆ ಅದನ್ನು ಜಾರಿಗೊಳಿಸಿತ್ತು.
ಸಾಲ ಮನ್ನಾ ಮಿತಿ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಬಿಜೆಪಿ ಚುನಾವಣಾ ತಂತ್ರ ಎಂದು ಹೇಳಿದೆ. "ಹೇಮಂತ್ ಸರ್ಕಾರ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಕಳೆದ ಐದು ವರ್ಷದಲ್ಲಿ ಯಾವುದೇ ಅರ್ಥಪೂರ್ಣ ಪ್ರಗತಿಯಾಗಿಲ್ಲ. ಇದೀಗ ಅವರ ಅವಧಿ ಕೊನೆಗೊಳ್ಳುತ್ತಾ ಬಂದಿದ್ದು, ಚುನಾವಣೆಯಲ್ಲಿ ಹಿನ್ನಡೆ ಅನುಭವಿಸುವ ಭೀತಿಯಿಂದ ಇಂಥ ತುರಾತುರಿಯ ನಿರ್ಧಾರ ಕೈಗೊಂಡಿದೆ" ಎಂದು ಬಿಜೆಪಿ ವಕ್ತಾರ ಅಜಯ್ ಶಾ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ರೈತರ ವಿರುದ್ಧ ಕೇಂದ್ರ ಸರ್ಕಾರ ಸಂಚು ಹೂಡಿದೆ ಎಂದು ಆಪಾದಿಸಿದರು. ರೈತರ ಆದಾಯ ದ್ವಿಗುಣಗೊಳಿಸಲು ಅಥವಾ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅವರ ಬಳಿ ಹಣ ಇಲ್ಲ. ಆದರೆ ವ್ಯವಹಾರ ಸಾಲಗಳನ್ನು ಮನ್ನಾಮಾಡಲು ಹಣ ಇದೆ ಎಂದು ಲೇವಡಿ ಮಾಡಿದರು.